ರಾಜ್ಯಸಭೆ ಚುನಾವಣೆಗೆ ಹೆಚ್ಚಿದ ಬಿಜೆಪಿ ಆಕಾಂಕ್ಷಿಗಳ ಪಟ್ಟಿ

ಬೆಂಗಳೂರು,ಫೆ.28-ಮಾರ್ಚ್ 23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಪ್ರತಿಪಕ್ಷ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ.
ಹಾಲಿ ರಾಜ್ಯಸಭಾ ಸದಸ್ಯರಾಗಿದ್ದ ಬಸವರಾಜ ಪಾಟೀಲ್ ಸೇಡಂ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಈ ಸ್ಥಾನಕ್ಕೆ ಯಾರನ್ನು ಒಮ್ಮತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂಬ ಜಿಜ್ಞಾಸೆ ರಾಜ್ಯ ನಾಯಕರಿಗೆ ಎದುರಾಗಿದೆ.
ಪಕ್ಷೇತರ ಸದಸ್ಯ ಹಾಗೂ ಬಿಜೆಪಿ ಪರ ಒಲವು ಹೊಂದಿರುವ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಲು ಸಹಕರಿಸಬೇಕೆಂದು ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.
ಇನ್ನು ರಾಜ್ಯ ಉಸ್ತುವಾರಿಯಾಗಿರುವ ಮುರುಳೀಧರ್ ರಾವ್ ಅವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು ಕರ್ನಾಟಕದಿಂದ ತಮ್ಮನ್ನು ರಾಜ್ಯಸಭೆಗೆ ಕಳುಹಿಸಿಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಮುರುಳೀಧರ್ ರಾವ್‍ಗೆ ಆರ್‍ಎಸ್‍ಎಸ್ ಬೆಂಬಲದ ಜೊತೆಗೆ ಕೇಂದ್ರ ನಾಯಕರ ಆಶೀರ್ವಾದವೂ ಇದೆ. ಮೂಲತಃ ಆಂಧ್ರಪ್ರದೇಶದವರಾದ ಅವರು ಪಕ್ಷ ಸಂಘಟನೆ ಹಾಗೂ ಸಂಘಪರಿವಾರಕ್ಕೆ ಯಾವಾಗಲೂ ನಿಷ್ಠೆಯಿಂದ ಇದ್ದವರು.
2014ರ ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪಕ್ಷ ವಹಿಸಿದ ಯಾವುದೇ ಕೆಲಸಗಳನ್ನು ನಿಷ್ಠೆಯಿಂದಲೇ ನಿಭಾಯಿಸಿದ ಯಶಸ್ಸು ಅವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ಮುನಿಸಿಕೊಂಡ ನಾಯಕರ ಮನವೊಲಿಕೆ, ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಹೋರಾಟ ಸೇರಿದಂತೆ ಹಲವು ತಂತ್ರಗಳನ್ನು ರೂಪಿಸಿ ಪಕ್ಷಕ್ಕೆ ಹೊಸ ಹುರುಪು ನೀಡಿದ್ದರು.
ಕೇಂದ್ರ ನಾಯಕರ ಬೆಂಬಲ ಅವರಿಗಿರುವುದರಿಂದ ಬಿಜೆಪಿ ಅಭ್ಯರ್ಥಿಯಾಗಿ ಮುರುಳೀಧರ್ ರಾವ್ ಕಣಕ್ಕಿಳಿಯಬಹುದು. ಆದರೆ ರಾಜ್ಯ ನಾಯಕರು ರಾಜೀವ್ ಚಂದ್ರಶೇಖರ್ ಜೊತೆ ಆತ್ಮೀಯತೆ ಹೊಂದಿರುವುದರಿಂದ ಯಾರಿಗೆ ಬೆಂಬಲ ನೀಡಬೇಕು ಎಂಬ ಜಿಜ್ಞಾಸೆಗೆ ಸಿಲುಕಿದ್ದಾರೆ.
ಇದರ ನಡುವೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪಕ್ಷದ ವಕ್ತಾರೆ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗೌಡ ಕೂಡ ತಮ್ಮನ್ನು ಅಭ್ಯರ್ಥಿಯಾಗಿ ಪರಿಗಣಿಸುವಂತೆ ರಾಜ್ಯ ನಾಯಕರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಪಕ್ಷಕ್ಕೆ ಸೇರಿ ಕೆಲವೇ ದಿನಗಳಾಗಿರುವುದರಿಂದ ರಾಜ್ಯಸಭೆಯಂತಹ ಉನ್ನತ ಸ್ಥಾನಕ್ಕೆ ತೇಜಸ್ವಿನಿ ರಮೇಶ್ ಅವರನ್ನು ಪರಿಗಣಿಸುವ ಸಾಧ್ಯತೆಗಳು ತೀರಾ ಕಷ್ಟಸಾಧ್ಯ ಎನ್ನಲಾಗುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲದ ಪ್ರಕಾರ ಒಬ್ಬ ಅಭ್ಯರ್ಥಿಯನ್ನು ಮಾತ್ರ ರಾಜ್ಯಸಭೆಗೆ ಆಯ್ಕೆ ಮಾಡಲು ಸಾಧ್ಯವಿದೆ.
ಚುನಾವಣೆಗೆ ಇನ್ನು ಕೆಲವು ದಿನಗಳು ಬಾಕಿ ಇರುವುದರಿಂದ ರಾಜ್ಯ ನಾಯಕರು ಈವರೆಗೆ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ