
ಮೈಸೂರು, ಫೆ.28- ಸಮಾಜದಲ್ಲಿ ಪ್ರಕಾಶ್ ರೈ ಅವರ ಮಾನ-ಮರ್ಯಾದೆಗೆ ಇರುವ ಬೆಲೆ ಒಂದು ರೂ. ಎಂಬುದನ್ನು ನ್ಯಾಯಾಲಯದಲ್ಲಿ ಅವರೇ ಒಪ್ಪಿಕೊಂಡಂತಾಗಿದೆ ಎಂದು ಹರಿಹಾಯ್ದಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿಂದು ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಪ್ರತಾಪ್ ಸಿಂಹ, ಪ್ರಕಾಶ್ ರೈಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿರುವುದಲ್ಲದೆ ರೀಲ್ ಮತ್ತು ರಿಯಲ್ ಎರಡೂ ಲೈಫ್ನಲ್ಲಿ ಅವರಿಗೆ ಸಮಾಜದಲ್ಲಿ ಕೊಡುತ್ತಿರುವ ಬೆಲೆ ಮೂರು ಕಾಸಿನದ್ದಾಗಿದೆ. ಹಾಗಾಗಿ ಒಂದು ರೂ.ಗೆ ಬದಲು ಮೂರು ಕಾಸಿನ ಬೆಲೆಗೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಟೀಕಿಸಿದರು.
ನಾನು ಇಲ್ಲದ ವೇಳೆ ದೆಹಲಿಯ ಜ್ಯುಬಿಲಿ ಹಿಲ್ಸ್ಗೆ ಲೀಗಲ್ ನೋಟಿಸ್ ಬಂದಿತ್ತು. ಅದರಲ್ಲಿ ಪ್ರಕಾಶ್ರಾಜ್ ಎಂಬ ಹೆಸರಿತ್ತು. ನನಗೆ ಅವರಿಗೆ ಹೆಸರಿನ ಬಗ್ಗೆ ಗೊಂದಲವಾಯಿತು. ಅವರ ಹೆಸರು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ಯಾವುದು ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿದ್ದೇನೆ ಎಂದರು.
ಸಿನಿಮಾದಲ್ಲಿ ಹೆಸರು ಬದಲಿಸುವಂತೆ ನಿಜ ಜೀವನದಲ್ಲೂ ಪ್ರಕಾಶ್ ರೈ ಊರಿಗೊಂದು ಹೆಸರು ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಪ್ರಕಾಶ್ ರೈ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾನು ಅವರ ಬಗ್ಗೆ ಪೆÇೀಸ್ಟರ್ ಶೇರ್ ಮಾಡಿದ್ದೆ. ಆದರೆ, ಅದು ನಾನು ಸೃಷ್ಟಿಸಿದ್ದಲ್ಲ. ನನಗೆ ಬಂದ ಪೆÇೀಸ್ಟರ್ಅನ್ನು ಶೇರ್ ಮಾಡಿದ್ದೆ. ಹಾಗಾಗಿ ನನ್ನ ಮೇಲೆ ಮೊಕದ್ದಮೆ ಹೂಡಲು ಬರುವುದಿಲ್ಲ ಎಂದು ತಿಳಿಸಿದರು.
ಸಂಸದ ಅನಂತ್ಕುಮಾರ್ ಹೆಗಡೆ ಅವರಿಗೆ ಮತ ಹಾಕಬಾರದೆಂದು ಪ್ರಕಾಶ್ ರೈ ಹೇಳಿಕೆ ನೀಡುತ್ತಿದ್ದಾರೆ. ಪ್ರಕಾಶ್ ರೈ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕಡೆ ಸ್ಪರ್ಧಿಸಲಿ. ಅವರನ್ನು ಸೋಲಿಸಿ ತಕ್ಕ ಪಾಠ ಕಲಿಸುತ್ತೇನೆ ಎಂದು ಸವಾಲು ಹಾಕಿದರು.