ಬಹು ನಿರೀಕ್ಷಿತ ಪಾಸ್ಪೋರ್ಟ್ ಕೇಂದ್ರ ಇಂದು ಅಧಿಕೃತವಾಗಿ ಉದ್ಘಾಟನೆ

ತುಮಕೂರು, ಫೆ.28- ಜಿಲ್ಲೆಯ ಬಹು ನಿರೀಕ್ಷಿತ ಪಾಸ್ಪೋರ್ಟ್ ಕೇಂದ್ರ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು , ಜಿಲ್ಲೆಯ ಜನರಲ್ಲಿ ಸಂತಸ ಮೂಡಿದೆ.
ಪಾಸ್ಪೋರ್ಟ್ ಕೇಂದ್ರವನ್ನು ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ವಿದ್ಯಾಭ್ಯಾಸ, ವಿದೇಶ ಪ್ರವಾಸ, ಉದ್ಯೋಗ ಸೇರಿದಂತೆ ಮತ್ತಿತರ ಕೆಲಸಗಳಿಗೆ ವಿದೇಶಕ್ಕೆ ತೆರಳುವ ಜನರಿಗೆ ಅನುಕೂಲವಾಗಿದೆ ಎಂದರು.
ಪಾಸ್ಪೋರ್ಟ್ ಮಾಡಿಸಬೇಕೆಂದರೆ ಬೆಂಗಳೂರಿಗೆ ಐದಾರು ಬಾರಿ ಓಡಾಡಬೇಕಿತ್ತು. ಆದರೆ ಈಗ ನಗರದಲ್ಲೇ ಕೇಂದ್ರ ಆರಂಭವಾಗಿರುವುದರಿಂದ ಕೆಲಸ ಸುಲಭವಾಗಿದೆ.
ವಿದೇಶಾಂಗ ಹಾಗೂ ದೂರ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಪಾಸ್ಪೋರ್ಟ್ ಕೇಂದ್ರವನ್ನು ತೆರೆಯಲಾಗಿದ್ದು , ಇದಕ್ಕಾಗಿ ಸತತ 2 ವರ್ಷಗಳಿಂದ ಶ್ರಮ ವಹಿಸಲಾಗಿದ್ದು , ಶೆಟ್ಟಿಹಳ್ಳಿ ಬಳಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಸಂಸದ ಮುದ್ದ ಹನುಮೇಗೌಡ ಅವರ ಶ್ರಮವೂ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ, ಪಾಸ್‍ಪೆÇೀರ್ಟ್ ಕೇಂದ್ರ ಸ್ಥಾಪನೆಗೆ ಕಳೆದ ಆರು ತಿಂಗಳಿನಿಂದಲೂ ಜಾಗ ಪರಿಶೀಲನೆ ಮಾಡಲಾಗುತ್ತಿತ್ತು. ಸ್ಥಳೀಯ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಶೆಟ್ಟಿಹಳ್ಳಿ ಬಳಿ ಜಾಗ ದೊರೆತಿದ್ದು , ಈಗ ಪಾಸ್‍ಪೆÇೀರ್ಟ್ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಪಾಸ್ಪೋರ್ಟ್ ಪರಿಶೀಲನೆಗೆ ಪೆÇಲೀಸ್ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಪೊಲೀಸರು ಸ್ಪಂದಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರದ ಶಾಸಕ ರಫೀಕ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಜಿಲ್ಲಾಧಿಕಾರಿ ಮೋಹನರಾಜ್, ಎಪಿಎಂಸಿ ಅಧ್ಯಕ್ಷ ಗಂಗಾಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ