ಸರ್ಕಾರಿ ಹೆಂಗಸರು ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ

ಕೆಜಿಎಫ್, ಫೆ.28- ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಗಾದೆ ಮಾತಿನಂತೆ ರಾಬರ್ಟಸನ್‍ಪೇಟೆಯ ಸರ್ಕಾರಿ ಹೆಂಗಸರು ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಕಳೆದ ಶನಿವಾರ ಮುಂಜಾನೆ ಚಲ್ದಿಗಾನಹಳ್ಳಿಯ ರವಿಚಂದ್ರ ಮತ್ತು ಮಾಲಾ ಎಂಬುವರಿಗೆ ಜನಿಸಿದ ಗಂಡು ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ರಾಜಾರೋಷವಾಗಿ ಅಪಹರಣ ಮಾಡಿದ ಘಟನೆಯ ಸಂಬಂಧವಾಗಿ ಆಸ್ಪತ್ರೆಯ ವೈಫಲ್ಯ ಎಲ್ಲರ ಖಂಡನೆಗೆ ಗುರಿಯಾಗಿತ್ತು. ಮುಖ್ಯ ದ್ವಾರವನ್ನು ಹೊರತುಪಡಿಸಿ ಪ್ರಾಮುಖ್ಯವಲ್ಲದ ಕಡೆಗಳಲ್ಲಿ ಮಾತ್ರ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಮಹಿಳೆ ಮಗುವನ್ನು ಸುಲಭವಾಗಿ ಬ್ಯಾಗಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಳು.
ಸಾಕಷ್ಟು ದೊಡ್ಡದಾಗಿರುವ ಮತ್ತು ಹಲವಾರು ಹೊರ ಹೋಗುವ ಬಾಗಿಲುಗಳನ್ನು ಹೊಂದಿರುವ ಹೆರಿಗೆ ಆಸ್ಪತ್ರೆಗೆ 4 ಮತ್ತು ಸಾರ್ವಜನಿಕ ಆಸ್ಪತ್ರೆಗೆ 4 ಕ್ಯಾಮೆರಾಗಳನ್ನು ಮಾತ್ರ ಅಳವಡಿಸಲಾಗಿತ್ತು. ಕ್ಯಾಮೆರಾಗಳನ್ನು ಅಳವಡಿಸುವ ವಿಚಾರದಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ.
ಮಾರುಕಟ್ಟೆ ಬೆಲೆಗಿಂತ ಅತಿ ಹೆಚ್ಚು ಹಣ ನೀಡಿ ಸಾಮಾನ್ಯ ಗುಣಮಟ್ಟದ ಕ್ಯಾಮರಗಳನ್ನು ಅಳವಡಿಸಿರುವುದು ಕಂಡು ಬಂದಿದೆ.
ಕಳೆದ ವರ್ಷ ಮಾರ್ಚಿ ತಿಂಗಳಲ್ಲಿ ಕ್ಯಾಮೆರಾ ಅಳವಡಿಸಿರುವುದಕ್ಕೆ ಬಿಲ್ ಪಾವತಿ ಮಾಡಲಾಗಿದೆ. ನಾಲ್ಕು ಕ್ಯಾಮರಕ್ಕೆ 45,000 ರೂಪಾಯಿ, ಡಿವಿಆರ್‍ಗೆ 30,000 ರೂಪಾಯಿ, ಪ್ರತಿ ಕೇಬಲ್ ಮೀಟರ್‍ಗೆ 86 ರೂಪಾಯಿಗಳನ್ನು ಪ್ರಮುಖವಾಗಿ ಖರ್ಚು ಮಾಡಲಾಗಿದೆ. ಇದು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಕ್ಯಾಮೆರಾಗೆ 3 ರಿಂದ 5 ಸಾವಿರ, ಡಿವಿಆರ್‍ಗೆ 10 ರಿಂದ 12 ಸಾವಿರ, ಕೇಬಲ್ ಮೀಟರ್‍ಗೆ ಹೆಚ್ಚೆಂದರೆ 50 ರೂ. ಸಿಗುತ್ತದೆ. ಆದರೆ ಇಷ್ಟೊಂದು ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡಿರುವುದರ ಬಗ್ಗೆ ಹಿರಿಯ ಅಧಿಕಾರಿಗಳೇಕೆ ಮೌನವಾಗಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಮಧ್ಯೆ ಮಗುವನ್ನು ಕಳೆದು ಕೊಂಡ ಪೆÇೀಷಕರು ಚಿಂತಾಕ್ರಾಂತರಾಗಿದ್ದಾರೆ. ಇದುವರೆವಿಗೂ ಮಗು ಪತ್ತೆಯಾದ ಬಗ್ಗೆಯಾಗಲಿ, ಕರ್ತವ್ಯ ನಿರ್ಲಕ್ಷ್ಯತೆ ತೋರಿದ ಆಸ್ಪತ್ರೆಯ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಜರುಗಿಸದ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗುವಂತೆ ಆಸ್ಪತ್ರೆಯ ಸಿಬ್ಬಂದಿ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಗು ಸಿಗುವ ತನಕ ಆಸ್ಪತ್ರೆಯಿಂದ ಹೋಗುವುದಿಲ್ಲ. ಆಸ್ಪತ್ರೆಯಿಂದ ಹೋದರೆ, ಮಗುವಿನ ಬಗ್ಗೆ ಎಲ್ಲರೂ ಮರೆತು ಹೋಗುತ್ತಾರೆ. ನಮಗೆ ನ್ಯಾಯ ಸಿಗುವುದಿಲ್ಲ ಎಂದು ಮಗುವಿನ ತಂದೆ ರವಿಚಂದ್ರ ಹೇಳುತ್ತಾರೆ.
ಹೆರಿಗೆಗೆ 1000 ರೂಪಾಯಿ, ಗಂಡು ಮಗುವಿನ ಮುಖ ದರ್ಶನಕ್ಕೆ 200 ರೂಪಾಯಿ, ದಾಖಲೆ ಸಹಿಗಾಗಿ 500 ರೂಪಾಯಿಗಳನ್ನು ಅಕ್ರಮವಾಗಿ ಸಿಬ್ಬಂದಿ ಪಡೆದಿದ್ದರು. ಘಟನೆ ನಡೆದ ಹಿನ್ನೆಲೆಯಲ್ಲಿ ಭೀತಿಗೊಂಡ ಸಿಬ್ಬಂದಿ ನಾವು ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆಯೋ ಎಂದು ಲಂಚದ ಹಣವನ್ನು ವಾಪಸ್ ನೀಡಲು ಬಂದಿದ್ದರು. ಆದರೆ ಮಗುವಿನ ಪೆÇೀಷಕರು ಅದನ್ನು ವಾಪಸ್ ಪಡೆಯಲು ನಿರಾಕರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ