ಚೆನ್ನೈ, ಫೆ.28-ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಇಂದು ಬೆಳಗ್ಗೆ ಚೆನ್ನೈನಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.
ಇಂಗ್ಲೆಂಡ್ನಿಂದ ಹಿಂದಿರುಗುತ್ತಿದ್ದಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ತಿ ಅವರನ್ನು ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಸಿದರು.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಯಕ್ರಮ ಸೇರಿದಂತೆ ಕೆಲವು ಪೂರ್ವ ನಿಗದಿತ ಭೇಟಿಗಾಗಿ ಯುನೈಟೆಡ್ ಕಿಂಗ್ಡಂಗೆ ತೆರೆಳಿದ್ದ ಕಾರ್ತಿ ಇಂದು ಬೆಳಗ್ಗೆ 8 ಗಂಟೆಗೆ ಚೆನ್ನೈ ಏರ್ಪೆÇೀರ್ಟ್ಗೆ ಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದರು.
ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ 300 ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆ ಸ್ವೀಕರಿಸುವುದಕ್ಕಾಗಿ ಐಎನ್ಎಕ್ಸ್ ಮೀಡಿಯಾ ಎಂಬ ಮಾಧ್ಯಮ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ) ನಿರಾಕ್ಷೇಪಣೆ ಮಂಜೂರು ಮಾಡಲು ಕಾರ್ತಿ ಅಕ್ರಮ-ಅವ್ಯವಹಾರಗಳನ್ನು ನಡೆಸಿದ್ದರು. ಈ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ಕಳೆದ ವರ್ಷ ಮೇ ತಿಂಗಳಿನಲ್ಲಿ ಕಾರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಕಾರ್ತಿ ಚಿದಂಬರಂ ಅವರೊಂದಿಗೆ ಐಎನ್ಎಕ್ಸ್ ಮೀಡಿಯಾ ಹಾಗೂ ಅದರ ನಿರ್ದೇಶಕರಾ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯಾ ವಿರುದ್ಧ ಸಹ ಹಣಕಾಸು ದುರ್ಬಳಕೆ (ಪಿಎಂಎಲ್ಎ) ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಇದೇ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೇ ಕಾರ್ತಿ ಚಿದಂಬರಂಗೆ ಸೇರಿದ ನಾಲ್ಕು ನಗರಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇಂದು ಬೆಳಗ್ಗೆ ಚೆನ್ನೈನಲ್ಲಿ ಬಂಧಿತರಾದ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿಶೇಷ ತಂಡ ದೆಹಲಿಗೆ ಕರೆದೊಯ್ದಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ.
ರಾಜಕೀಯ ದ್ವೇಷ-ಕಾಂಗ್ರೆಸ್ ಕಿಡಿ:
ತಮ್ಮ ಪುತ್ರ ಮತ್ತು ಉದ್ಯಮಿ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ಇದು ಪ್ರಧಾನಿ ಮೋದಿ ಸರ್ಕಾರದ ರಾಜಕೀಯ ದ್ವೇಷ ಮತ್ತು ಕುತಂತ್ರವಾಗಿದೆ. ತಮ್ಮ ಸರ್ಕಾರದ ಹಗರಣಗಳು ಮತ್ತು ದುರಾಡಳಿತಗಳನ್ನು ಮರೆ ಮಾಚುವ ಉದ್ದೇಶದಿಂದ ಹಾಗೂ ವಿಷಯಾಂತರಕ್ಕಾಗಿ ಈ ಕ್ರಮ ಕೈಗೊಂಡಿದೆ ಎಂದು ಟೀಕಿಸಿದ್ದಾರೆ.
ಕಾರ್ತಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಸಂವಹನ ಉಸ್ತುವಾರಿ ರಣ್ದೀಪ್ ಸುರ್ಜೆವಾಲಾ ಕೇಂದ್ರಸರ್ಕಾರದ ಇಂತಹ ಕುತಂತ್ರಗಳಿಂದ ಕಾಂಗ್ರೆಸ್ ವಿಚಲಿತರಾಗುವುದಿಲ್ಲ. ಸತ್ಯಾಂಶಕ್ಕಾಗಿ ಹೋರಾಟ ಮುಂದುವರೆಸಲಿದೆ ಎಂದು ಹೇಳಿದ್ದಾರೆ.