ಕಂಚಿ ಕಾಮಕೋಟಿ ಪೀಠಾಧೀಶರಾದ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿಧಿವಶ

ಚೆನ್ನೈ/ಕಂಚಿ, ಫೆ.28-ಕಂಚಿ ಕಾಮಕೋಟಿ ಪೀಠಾಧೀಶರಾದ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ಬೆಳಗ್ಗೆ ಚೆನ್ನೈನಲ್ಲಿ ವಿಧಿವಶರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಉಸಿರಾಟ ಮತ್ತು ಅನಾರೋಗ್ಯದಿಂದ ಕೆಲದಿನಗಳಿಂದ ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು.
ಜಯೇಂದ್ರ ಸರಸ್ವತಿ ಶ್ರೀಗಳು ಕಂಚಿ ಕಾಮಕೋಟಿ ಮಠದ 69ನೇ ಪೀಠಾಧಿಪತಿಯಾಗಿದ್ದು, 1954ರಿಂದಲೂ ಅವರು ಮಠಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು.
ತಮಿಳುನಾಡಿನ ತಂಜಾವೂರಿನ ಇರುಳ್‍ನೀಕಿಯಲ್ಲಿ 18ನೇ ಜುಲೈ 1935ರಲ್ಲಿ ಜನಿಸಿದ ಇವರ ಮೂಲ ಹೆಸರು ಸುಬ್ರಹ್ಮಣ್ಯಂ ಮಹದೇವ.
69ನೇ ಶಂಕರಾಚಾರ್ಯ ಗುರು ಆಗಿದ್ದ ಅವರ ಅನೇಕ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದರು.
ಇವರ ನೇತೃತ್ವದಲ್ಲಿ ಕಂಚಿ ಮಠವು ಅನೇಕ ಶಾಲೆಗಳು, ನೇತ್ರ ಕ್ಲಿನಿಕ್‍ಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಜಯೇಂದ್ರ ಶ್ರೀಗಳು ಆರಂಭಿಸಿದ್ದ ಚೈಲ್ಡ್ಸ್ ಟ್ರಸ್ಟ್ ಹಾಸ್ಟಿಟಲ್, ಹಿಂದೂ ಮಿಷನ್ ಆಸ್ಪತ್ರೆ, ತಮಿಳುನಾಡು ಆಸ್ಪತ್ರೆ ಹಾಗೂ ಇತರ ಸಾರ್ವಜನಿಕ ಕಲ್ಯಾಣ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದಿತ್ತು.
ಹಾಗೆಯೇ ಶ್ರೀಗಳು ಕೆಲವು ವಿವಾದಕ್ಕೂ ಗುರಿಯಾಗಿದ್ದರು. ಕಂಚಿ ವರದರಾಜ ಪೆರುಮಾಳ್ ದೇವಸ್ಥಾನದ ವ್ಯವಸ್ಥಾಪಕರ ಹತ್ಯೆ ಪ್ರಕರಣದಲ್ಲಿ ಇವರು ಶಾಮೀಲಾಗಿದ್ದರೆಂಬ ಆರೋಪದಲ್ಲಿ 2004ರ ನವೆಂಬರ್ 11ರಂದು ಜಯೇಂದ್ರ ಸರಸ್ವತಿ ಅವರನ್ನು ಬಂಧಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಈ ಪ್ರಕರಣದಿಂದ ಅವರು ಆರೋಪ ಮುಕ್ತರಾಗಿದ್ದರು.
ಧಾರ್ಮಿಕ ಅಧ್ವರ್ಯ ಆಗಿದ್ಧ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಯದುಗಿರಿ ಯತಿರಾಜಮಠದ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಅವರು ಸೇರಿದಂತೆ ಅನೇಕ ಗಣ್ಯರು, ವಿವಿಧ ಮಠಗಳ ಪೀಠಾಧ್ಯಕ್ಷರು ಸಂತಾಪ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ