
ನವದೆಹಲಿ, ಫೆ.28-ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಖ್ಯಾತ ಭೌತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ಫೆ.28, 1928ರಲ್ಲಿ ಕಂಡುಹಿಡಿದ ರಾಮನ್ ಎಫೆಕ್ಟ್ ಅನ್ವೇಷಣೆಗಾಗಿ ಅವರಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಗೌರವಾರ್ಥ ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ.
ನ್ಯಾಷನಲ್ ಸೈನ್ಸ್ ಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಮತ್ತು ವಿಜ್ಞಾನ ಪ್ರಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತವು ಮಹಾ ಸಾಧಕರಾದ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ. ವೈಜ್ಞಾನಿಕ ಸಂಶೋಧನೆಗಳ ಮೂಲಕ ಅವರು ವಿಜ್ಞಾನ ಕ್ಷೇತ್ರದ ಉತ್ಸಾಹವನ್ನು ವೃದ್ಧಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.