ಬೆಂಗಳೂರು, ಫೆ.28- ಪರಿಸರ ಮತ್ತು ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು ಕಡ್ಡಾಯ, ಕಲ್ಯಾಣ, ಆರೋಗ್ಯ, ಆಡಳಿತ ಸುಧಾರಣೆ, ಆರ್ಥಿಕ ಶಿಸ್ತು ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿರುವ ಪ್ರಸಕ್ತ ಸಾಲಿನ ಮತಸ್ನೇಹಿ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದ ಮತದಾರರನ್ನು ಸೆಳೆಯುವ ಉದ್ದೇಶಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಹೆಚ್ಚು ಒತ್ತು ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದ ಮೂರನೆ ಅವಧಿಯ ಬಜೆಟ್ ಇದಾಗಿದ್ದು, ಸಮಿತಿ ಅಧ್ಯಕ್ಷ ಮಹದೇವ್ ಅವರು ಇದೇ ಮೊದಲ ಬಾರಿಗೆ 9326.87 ಕೋಟಿ ರೂ. ಗಾತ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.
ರಾಜ್ಯ ಸರ್ಕಾರದ 3343.42 ಹಾಗೂ ಕೇಂದ್ರ ಸರ್ಕಾರದ 306.87 ಕೋಟಿ ರೂ.ಗಳ ಅನುದಾನ ಸೇರಿದಂತೆ ಪಾಲಿಕೆಯ ಉಳಿದ ಬಾಬ್ತಿನಿಂದ 9326.87 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 9325.53 ಕೋಟಿ ಖರ್ಚಿನ ಉಳಿತಾಯ ಬಜೆಟ್ ಇದಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ ಇದೇ ಮೊದಲ ಬಾರಿಗೆ ಪಾಲಿಕೆ ಬಜೆಟ್ನಲ್ಲಿ ದಿವ್ಯಾಂಗರ ಕಲ್ಯಾಣಕ್ಕೆ 68 ಕೋಟಿ ರೂ.ಗಳ ಭರ್ಜರಿ ಪ್ಯಾಕೇಜ್ ನೀಡಲಾಗಿದೆ.
ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್ನಿಂದ ಬಿಸಿಯೂಟ, ಸುರಕ್ಷಿತ ಸಾಧನಗಳ ಕಿಟ್ ವಿತರಣೆ, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಸತಿ ಸಮುಚ್ಛಯ, ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಣೆ, ಒಂಟಿ ಮನೆಗಳಿಗೆ ನೀಡುವ ಆರ್ಥಿಕ ಸಹಾಯ ಧನ 4 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಬಸವಲಿಂಗಪ್ಪ ಸಮಾಧಿ ಸುಧಾರಣೆಗೆ 50 ಲಕ್ಷ ಮೀಸಲು, ಕೌಶಲ್ಯಾಭಿವೃದ್ಧಿ ತರಬೇತಿಗೆ 5 ಕೋಟಿ ರೂ., ಪ್ರತಿ ವಾರ್ಡ್ನಲ್ಲಿ ಮಹಿಳಾ ಕಾರ್ಯಕ್ರಮ ಹಮ್ಮಿಕೊಳ್ಳಲು ತಲಾ 10 ಲಕ್ಷ ರೂ. ಮೀಸಲು, ಹಿರಿಯ ನಾಗರಿಕರ ಕಲ್ಯಾಣಕ್ಕೆ 3 ಕೋಟಿ ರೂ. ಹಾಗೂ ಇಂದಿರಾ ಕ್ಯಾಂಟಿನ್ ಮೂಲಕ ಬಿಸಿಯೂಟ ವಿತರಣೆ, ಅರ್ಹ ಹಿರಿಯ ನಾಗರಿಕರಿಗೆ ಪ್ರತಿ ವಾರ್ಡ್ಗೆ 100ರಂತೆ ವಾಕಿಂಗ್ಸ್ಟಿಕ್ ವಿತರಣೆ, ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗೆ ಉಚಿತ ಮಾತ್ರೆ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.
ಟ್ರಾನ್ಸ್ ಜಂಡರ್ಗಳ ಕಲ್ಯಾಣಕ್ಕೆ 1 ಕೋಟಿ, ಶವ ರಕ್ಷಣೆಗೆ ಬಾಡಿಗೆ ರಹಿತ 40 ಫ್ರೀಜರ್ ಒದಗಿಸಲು 2 ಕೋಟಿ ಅನುದಾನ, ನಿರಾಶ್ರಿತರ ತಂಗುದಾಣಗಳ ಉನ್ನತೀಕರಣಕ್ಕೆ 2.5 ಕೋಟಿ ಮೀಸಲಿಡುವುದು ಸೇರಿದಂತೆ ಪ್ರತಿ ವಾರ್ಡ್ಗೆ ಹೊಲಿಗೆ ಯಂತ್ರ ಮತ್ತು ಸೈಕಲ್ ವಿತರಿಸಲಾಗುವುದು.
ಶಿಕ್ಷಣ: ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ಒದಗಿಸುವುದು, ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದು, ಶಾಲಾ ಆವರಣಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ 5 ಕೋಟಿ ರೂ. ಮೀಸಲು, ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಹೆಣ್ಣುಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ: ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷದ ಮೊದಲ ದಿನ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ 5 ಲಕ್ಷ ಠೇವಣಿ ಇಡುವ ಪಿಂಕ್ ಬೇಬಿ ಯೋಜನೆ ಜಾರಿಗೆ ತರಲಾಗುತ್ತಿದೆ.
ಪುಲಿಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ 15 ಕೊಟಿ ರೂ. ಮೀಸಲಿರಿಸಿದೆ. ಇಂದಿರಾ ಕ್ಯಾಂಟಿನ್ನಲ್ಲಿ ಜನೌಷಧ ಮಳಿಗೆ ತೆರೆಯುವುದು, ಗರ್ಭಿಣಿಯರಿಗೆ ಕಬ್ಬಿಣಾಂಶದ ಬಿಸ್ಕತ್ ವಿತರಣೆ, ಬಡ ಹೃದಯ ರೋಗಿಗಳಿಗೆ ನೀಡುವ ಉಚಿತ ಸ್ಟಂಟ್ ಅಳವಡಿಸುವ ಕಾರ್ಯಕ್ರಮ ಮುಂದುವರಿಸಲಾಗುತ್ತದೆ.
ಸಂಸ್ಕøತಿ ಮತ್ತು ಕ್ರೀಡೆ: ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪೆÇ್ರೀ ಉದ್ದೇಶದಿಂದ 5 ಕೋಟಿ ರೂ. ವೆಚ್ಚದಲ್ಲಿ 5 ಕಲಾಭವನ ನಿರ್ಮಾಣ ಮಾಡುವುದು, ಆಡೋಣ ಬಾ ಅಂಗಳದಲ್ಲಿ ಕಾರ್ಯಕ್ರಮದಡಿ ಪ್ರತಿ ವಾರ್ಡ್ಗೆ 1 ಲಕ್ಷ ಅನುದಾನ, ಹಾಕಿ ದಂತ ಕಥೆ ಧ್ಯಾನ್ಚಂದ್, ವೀರಯೋಧರಾದ ಸಂದೀಪ್ ಉನ್ನಿಕೃಷ್ಣನ್, ಮೇಜರ್ ಅಕ್ಷಯ್ ಗಿರೀಶ್ಕುಮಾರ್ ಅವರ ಪ್ರತಿಮೆ ಸ್ಥಾಪನೆ, 2 ಕೋಟಿ ರೂ. ವೆಚ್ಚದಲ್ಲಿ ಮೀಡಿಯಾ ಕೇಂದ್ರ ಸ್ಥಾಪನೆ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರಿಗೆ ಆರೋಗ್ಯ ರಕ್ಷಣೆ ವಿಮೆ ಜಾರಿಗೆ ತರಲಾಗುತ್ತಿದೆ.
ಘನತ್ಯಾಜ್ಯ ನಿರ್ವಹಣೆ: ಕೈಗಾರಿಕಾ ಶೆಡ್ಗಳಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪನೆ, ಪಣತ್ತೂರು ಮತ್ತು ಹಲಸೂರು ಪಶು ವೈದ್ಯ ಆಸ್ಪತ್ರೆ ಆವರಣದಲ್ಲಿ ಕೆನಲ್ ನಿರ್ಮಾಣ, ಶೆಟ್ಟಿಹಳ್ಳಿ ಮತ್ತು ಬಿಂಗಿಪುರ ಗ್ರಾಮದ ಲ್ಯಾಂಡ್ಫಿಲ್ನಲ್ಲಿ ದೊಡ್ಡಿ ನಿರ್ಮಾಣ, ಬೆಳ್ಳಳ್ಳಿ ವ್ಯಾಪ್ತಿಯ ಘನತ್ಯಾಜ್ಯ ಕ್ವಾರಿಯಲ್ಲಿ ರೇಸ್ಟ್ರ್ಯಾಕ್ ನಿರ್ಮಿಸಲು 2 ಕೋಟಿ, ಕನ್ನಳ್ಳಿ ಮತ್ತು ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ 100 ಕೋಟಿ ಮೀಸಲಿರಿಸಲಾಗಿದೆ.
ತೋಟಗಾರಿಕೆ: ಉದ್ಯಾನವನಗಳಲ್ಲಿ ಮತ್ತು ಕೆರೆ ಅಂಗಳದಲ್ಲಿ ಔಷಧಿ ಗಿಡ ನೆಡಲು 50 ಲಕ್ಷ , ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ವಿವಿಧ ಜಾತಿಯ ಗಿಡಗಳನ್ನು ನೆಡುವುದು, 50 ಉದ್ಯಾನವನಗಳಲ್ಲಿ ಶೌಚಾಲಯ ನಿರ್ಮಿಸಲು 1 ಕೋಟಿ ಮೀಸಲಿರಿಸಲಾಗಿದೆ. ಪಾರ್ಕ್ಗಳಲ್ಲಿ ಕನ್ನಡ ಸಾಹಿತಿಗಳನ್ನು ಪರಿಚಯಿಸುವ ಸೂಕ್ತಿ ಫಲಕಗಳ ಅಳವಡಿಕೆ ಮಾಡಲಾಗುತ್ತದೆ.
ಪರಿಸರ ನಿರ್ವಹಣೆ: ಮಳೆನೀರು ಕೊಯ್ಲು ಪದ್ಧತಿ ಅಳವಡಿಸಲು 12 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರತಿ ವಾರ್ಡ್ಗಳಲ್ಲಿ 200 ಸಸಿಗಳನ್ನು ನೆಡಲು ಮತ್ತು ಸಸ್ಯಕ್ಷೇತ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಕಾಮಗಾರಿಗಳು: ಖಾಸಗಿ ಸಹಭಾಗಿತ್ವದಲ್ಲಿ ಹಡ್ಸನ್ ವೃತ್ತದಲ್ಲಿ ಎಂಜಿನಿಯರ್ಡ್ ವುಡ್ ಉಪಯೋಗಿಸಿ ಅತಿ ಹೆಚ್ಚು ಉದ್ದದ ಐದು ಮಾರ್ಗಗಳನ್ನೊಳಗೊಂಡಿರುವ ಪಾದಚಾರಿ ಸ್ಕೈ ವಾಕ್ ನಿರ್ಮಾಣ, ಒಂದು ಸಾವಿರ ಸಾರ್ವಜನಿಕ ಶೌಚಾಲಯ ಹಾಗೂ ಇ-ಟಾಯ್ಲೆಟ್ ನಿರ್ಮಾಣ, ಎಂಟು ವಲಯಗಳ ವ್ಯಾಪ್ತಿಯಲ್ಲಿ ತಲಾ ಒಂದು ಹೆಲಿಪ್ಯಾಡ್ ನಿರ್ಮಿಸಲು 5 ಕೋಟಿ, ಪ್ರತಿ ವಾರ್ಡ್ಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 30 ಕೋಟಿ, ಕನ್ನಡಮಯ ಬಸ್ ನಿಲ್ದಾಣಕ್ಕೆ 5 ಕೋಟಿ, ಅಗತ್ಯವಿರುವ ಕಡೆ ಅಗಸರಕಟ್ಟೆ ನಿರ್ಮಿಸಲು 1 ಕೋಟಿ, ತುರ್ತು ಚಿಕಿತ್ಸೆ ಸಂಬಂಧ 3 ಹೊಸ ಆ್ಯಂಬುಲೆನ್ಸ್ ಖರೀದಿಸಲು 1 ಕೋಟಿ ಮೀಸಲಿರಿಸಲಾಗಿದೆ.
150 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡುವುದು, 40 ಕೆರೆಗಳ ಅಭಿವೃದ್ಧಿ, 100 ಕಿಮೀ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ, 8 ಜಂಕ್ಷನ್ಗಳಲ್ಲಿ ಗ್ರೇಡ್ ಸಪರೇಟರ್, 150ಕಿಮೀ ಉದ್ದದ ನೀರ್ಗಾಲುವೆ ಅಭಿವೃದ್ಧಿ, 250ಕಿಮೀ ಉದ್ದದ ಪಾದಚಾರಿ ಮಾರ್ಗ ಅಭಿವೃದ್ಧಿ, 110 ಹಳ್ಳಿಗಳ ರಸ್ತೆ ಅಭಿವೃದ್ಧಿ, ಐಟಿಪಿಎಲ್ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎನ್ಎಎಲ್ ವಿಂಡ್ ಟನಲ್ ರಸ್ತೆ ನಿರ್ಮಾಣ, ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ 500 ಕೋಟಿ ರೂ.ಗಳ ಕ್ರಿಯಾಯೋಜನೆ, 25 ರಸ್ತೆಗಳ ಟೆಂಡರ್ ಶ್ಯೂರ್ ಮಾದರಿ ಅಭಿವೃದ್ಧಿ, ಕೆಆರ್ ಮಾರುಕಟ್ಟೆ ಪುನಶ್ಚೇತನ, ವಿವಿಧ ಕೆರೆಗಳ ಅಭಿವೃದ್ಧಿ ಮತ್ತು ಆಸ್ಪತ್ರೆಗಳ ನವೀಕರಣ, ಬಹುಮಹಡಿ ವಾಹನ ನಿಲ್ದಾಣ ನಿರ್ಮಾಣ, ನಾಗರಿಕ ಸೇವೆಗಳನ್ನು ಸುಲಭವಾಗಿ ಒದಗಿಸಲು ಪಾಸ್ಪೆÇೀರ್ಟ್ ಸೇವಾ ಮಾದರಿಯಲ್ಲಿ ಸ್ವಯಂಚಾಲಿತ ಆನ್ಲೈನ್ ತಂತ್ರಾಂಶ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
ಆಡಳಿತ ಸುಧಾರಣೆ: ಮಹಾಪೌರರು ಮತ್ತು ಆಯುಕ್ತರ ಭವನ ನಿರ್ಮಿಸಲು 5 ಕೋಟಿ ರೂ. ಮೀಸಲು, ಪಾಲಿಕೆ ಸದಸ್ಯರ ವೈದ್ಯಕೀಯ ಅನುದಾನ 4 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಳ, ವೈದ್ಯಕೀಯ ಅನುದಾನಕ್ಕೆ ಆಧಾರ್ ಸಂಖ್ಯೆ ಕಡ್ಡಾಯ, ಪಾಲಿಕೆಯ ಎಲ್ಲ ಸದಸ್ಯರಿಗೆ ಟ್ಯಾಬ್ ವಿತರಣೆ, ವಿದೇಶ ಮತ್ತು ಹೊರರಾಜ್ಯಗಳ ಅತಿಥಿಗಳ ಉಪಚಾರಕ್ಕೆ 60 ಲಕ್ಷ ಮೀಸಲು, ಪಾಲಿಕೆಯ ಎಲ್ಲ ಸಿಬ್ಬಂದಿಗೆ ಕೌಶಲ್ಯ ತರಬೇತಿ, ಪ್ರಮುಖ ರಸ್ತೆಗಳು, ಪಾಲಿಕೆ ಕಚೇರಿ, ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ನೆಟ್ವರ್ಕ್, ಕಂದಾಯ ಸೋರಿಕೆ ತಡೆಗಟ್ಟಲು ಕಂದಾಯ ಜಾಗೃತ ದಳ ಸ್ಥಾಪನೆ, ಸೈನಿಕರು ವಾಸಿಸುವ ವಾಸದ ವಸತಿ ಕಟ್ಟಡಕ್ಕೆ ಶೇ.100ರಷ್ಟು ವಿನಾಯಿತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.