ಬಜೆಟ್‍ನಲ್ಲಿ ಆಟೋ ಚಾಲಕರಿಗೆ ಯಾವುದೇ ಸೌಲಭ್ಯ ಘೋಷಣೆ ಮಾಡದೆ ಇರುವುದನ್ನು ಖಂಧಿಸಿ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಪ್ರತಿಭಥನೆ

ಬೆಂಗಳೂರು, ಫೆ.28- ಬಜೆಟ್‍ನಲ್ಲಿ ಆಟೋ ಚಾಲಕರಿಗೆ ಯಾವುದೇ ಸೌಲಭ್ಯ ಘೋಷಣೆ ಮಾಡದೆ ಇರುವುದು ಹಾಗೂ ಹೊಸ ಆಟೋ ಖರೀದಿಗೆ ಸಹಾಯ ಧನ ನೀಡದಿರುವುದನ್ನು ಖಂಡಿಸಿ ಇಂದು ಆಟೋ ರಿಕ್ಷಾ ಡ್ರೈವರ್ ಯೂನಿಯನ್ ವಿಧಾನಸೌಧ ಚಲೋ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಿತು.
ಆಟೋ ಚಾಲಕರ ಕಲ್ಯಾಣ ಮಂಡಳಿ ರಚಿಸಬೇಕು. ಆಟೋ ಚಾಲಕರಿಗೆ ಮನೆ ಅಥವಾ ನಿವೇಶನದ ಸೌಲಭ್ಯ ಒದಗಿಸಬೇಕು. ಇದರೊಂದಿಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವ ಓಲಾ, ಊಬರ್ ಕಂಪೆನಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಹೊರಟ ಆಟೋ ರಿಕ್ಷಾಗಳ ಚಲೋ ವಿಧಾನಸೌಧದವರೆಗೂ ನಡೆಸಲಾಯಿತು.
ಬೆಂಗಳೂರಿನಾದ್ಯಂತ 1.25 ಲಕ್ಷ ಆಟೋರಿಕ್ಷಾ ಪರ್ಮಿಟ್ ನೀಡಲಾಗಿದೆ. ಆದರೆ, ಓಲಾ, ಊಬರ್, ಮೆಟ್ರೋ ರೈಲು, ಬಿಎಂಟಿಸಿ, ಹೆಚ್ಚುವರಿ ಬಸ್‍ಗಳಿಂದಾಗಿ ಆಟೋ ಚಾಲಕರಿಗೆ ಆದಾಯವಿಲ್ಲದಂತಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೆಚ್ಚಿನ ಪರ್ಮಿಟ್ ಬಿಡುಗಡೆ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಮಾದರಿಯಲ್ಲೇ ಆಟೋ ಚಾಲಕರಿಗೂ ಸೌಲಭ್ಯ ಕಲ್ಪಿಸಬೇಕು. ಆಟೋ ಇನ್ಸುರೆನ್ಸ್ ಪ್ರೀಮಿಯಂ ದರ ವಿಪರೀತವಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷೆ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಎಚ್.ಬಿ.ಗಂಗರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ