ಮುಂಬಯಿ: ಕಳೆದ ಶನಿವಾರ ದುಬೈನಲ್ಲಿ ಮೃತಪಟ್ಟ ಬಹುಭಾಷಾ ತಾರೆ ಶ್ರೀದೇವಿ ಪಾರ್ಥಿವ ಶರೀರವನ್ನು ಕೊನೆಗೂ ಮುಂಬೈಗೆ ಮಂಗಳವಾರ ರಾತ್ರಿ ಕರೆತರಲಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.
ವಿಮಾನ ನಿಲ್ದಾಣದಿಂದ ನೇರವಾಗಿ ಪಾರ್ಥಿವ ಶರೀರವನ್ನು ಲೋಖಂಡವಾಲಾಗೆ ಕೊಂಡೊಯ್ಯಲಾಯಿತು. ಮಧ್ಯಾಹ್ನ 12.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ವಿಲ್ಲೆಪಾರ್ಲೆಯ ಪವನ್ ಹನ್ಸ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ..
ವಿಮಾನ ನಿಲ್ದಾಣಕ್ಕೆ ಪುತ್ರಿಯರು, ಅನಿಲ್ ಕಪೂರ್, ಸಂಜಯ್ ಕಪೂರ್, ಅನಿಲ್ ಅಂಬಾನಿ, ಟೀನಾ ಅಂಬಾನಿ, ಅಮರ್ ಸಿಂಗ್, ಶ್ರೀದೇವಿ ಕುಟುಂಬ ಸದಸ್ಯರು ಹಾಗೂ ಆತ್ಮೀಯರು ಆಗಮಿಸಿದ್ದರು..
ಸುದೀರ್ಘ ತನಿಖೆ, ವಿಚಾರಣೆ, ಪರಿಶೀಲನೆಗಳ ನಂತರ ದುಬೈ ಪೊಲೀಸರು ಮತ್ತು ಪ್ರಾಸಿಕ್ಯೂಷರ್‌ನಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರ ಮಂಗಳವಾರ ಸಂಜೆ 6.30 ರ ವೇಳೆಗೆ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಯಿತು. ರಾತ್ರಿ 9.30-10.00 ಗಂಟೆ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಹೊತ್ತ ವಿಮಾನ ಆಗಮಿಸಿತು.