ಬೆಂಗಳೂರು, ಫೆ.27-ನೇಕಾರರ ಸಮುದಾಯದ ಅಧೀನದಲ್ಲಿ ಬರುವ ಎಲ್ಲಾ ಮಠದ ಸ್ವಾಮೀಜಿಗಳಿಗೂ ಗುರುವಂದನಾ ಕಾರ್ಯಕ್ರಮ ಹಾಗೂ ನೇಕಾರರ ಜಾಗೃತಿ ಸಮಾವೇಶವನ್ನು ಮಾರ್ಚ್ 4 ರಂದು ಅರಮನೆ ಮೈದಾನದ ಪ್ರಿನ್ಸ್ಶೈನ್ನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಮಹಾಸಭಾದ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಂಗ, ತೊಗಟವೀರ, ಪದ್ಮಸಾಲಿ, ಪಟ್ಟಶಾಲೆ, ಕುರುಹಿನ ಶೆಟ್ಟಿ, ಹಠಗಾರ ಸೇರಿದಂತೆ ವಿವಿಧ ಹೆಸರಿನಿಂದ ಗುರುತಿಸಿಕೊಂಡಿರುವ ನೇಕಾರರು ಹಲವಾರು ವರ್ಷಗಳಿಂದ ನೇಕಾರಿಕೆ ವೃತ್ತಿ ಮಾಡಿಕೊಂಡು ಸಮಾಜದ ಮುಖ್ಯವಾಹಿತಿಗೆ ಬರಲು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಆದರೆ ಇವರ ಪ್ರಯತ್ನಕ್ಕೆ ಯಾವುದೇ ಬೆಂಬಲ ಸಿಕ್ಕಿಲ್ಲ ಹಾಗೂ ಅಭಿವೃದ್ಧಿಗೊಂಡಿಲ್ಲ ಎಂದು ವಿವರಿಸಿದರು.
ರಾಜ್ಯದಲ್ಲಿ ಸರಿಸುಮಾರು 60ಲಕ್ಷಕ್ಕೂ ಹೆಚ್ಚು ನೇಕಾರರಿದ್ದು, ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಕ್ಷೇತ್ರದಲ್ಲಿ ಸಮಾನವಾದ ಅವಕಾಶ ದೊರೆತಿಲ್ಲ.ರಾಜ್ಯಸರ್ಕಾರವು ಪ್ರತಿ ವರ್ಷದ ಬಜೆಟ್ನಲ್ಲಿ ನೇಕಾರರ ಉಳಿವಿಗಾಗಿ ಕೆಲವು ಯೋಜನೆ ಮತ್ತು ಕಾರ್ಯಕ್ರಮಗಳು ರೂಪಿಸಿದರಾದರೂ ಯಾವುದೂ ಅನುಷ್ಠಾನಗೊಂಡಿಲ್ಲ ಎಂದರು.
ನೇಕಾರರ ಒಗ್ಗೂಡುವಿಕೆಯ ಹಾದಿಯಲ್ಲಿ ಕಳೆದ ವರ್ಷದಿಂದ ಸಮಾಜದ ಸಂಘಟನೆಯಲ್ಲಿ ನೇಕಾರ ಸಮುದಾಯದ ಸ್ವಾಮೀಜಿಗಳು ತೊಡಗಿಕೊಂಡಿದ್ದು, ಇವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ನೇಕಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದು, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್ರಾವ್, ಸಂಸದೆ ಶೋಭಾಕರಂದ್ಲಾಜೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.