ರಾಜಕಾರಣ ಕಲುಷಿತವಾಗಿದೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕಳವಳ

ಬೆಂಗಳೂರು, ಫೆ.27-ಕೆ.ಸಿ.ರೆಡ್ಡಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಆನಂತರ ಮುಖ್ಯಮಂತ್ರಿಯಾದರು. ಆದರೆ ಈಗ ಮುಖ್ಯಮಂತ್ರಿಯಾದ ಮೇಲೆ ಜೈಲಿಗೆ ಹೋಗಿ ಬರುತ್ತಿದ್ದಾರೆ. ರಾಜಕಾರಣ ಕಲುಷಿತವಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದರು.
ಕೇಂದ್ರ ಅಂಚೆ ಕಚೇರಿಯಲ್ಲಿಂದು ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಕುರಿತು ಹೊರತರಲಾದ ಸ್ಟ್ಯಾಂಪ್ ಮತ್ತು ವಿಶೇಷ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೆ.ಸಿ.ರೆಡ್ಡಿ ಅವರು ಬಯಲುಸೀಮೆಯಾದ ಕೋಲಾರ ಜಿಲ್ಲೆಯವರು. ಅಲ್ಲಿನ ಜನ ಕಲ್ಲು ಕುಟ್ಟಿ ನೀರು ತೆಗೆದು ಬೆಳೆ ಬೆಳೆಯುತ್ತಾರೆ. ಅಂತಹ ಶ್ರಮಜೀವಿಗಳು ಎಂದು ಬಣ್ಣಿಸಿದರು.
ರಾಜಕಾರಣ ಮಾನವೀಯ ವಿಜ್ಞಾನವಿದ್ದಂತೆ. ಇಂತಹ ರಾಜಕಾರಣದಿಂದ ಜನರಿಗೆ ಅನುಕೂಲವಾಗಬೇಕು. ಆದರೆ ಈಗ ರಾಜಕಾರಣ ಎಂದರೆ ಜನ ಮೂಗು ಮುರಿಯುತ್ತಾರೆ. ಹಣ, ಆಸ್ತಿ ಗಳಿಕೆಗೆ ರಾಜಕಾರಣ ಎಂಬಂತಾಗಿ ಬಿಟ್ಟಿದೆ ಎಂದು ವಿಷಾದಿಸಿದರು.
ಕೆ.ಸಿ.ರೆಡ್ಡಿ ಅವರು ರಾಜಕಾರಣದಲ್ಲಿದ್ದರು ಎನ್ನುವುದೇ ಒಂದು ಆದರ್ಶ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಆದರೆ ಇಂದಿಗೂ ಮಹಿಳೆಯರಿಗೆ, ದಲಿತರಿಗೆ, ರೈತರಿಗೆ ಸಮಾನ ಅವಕಾಶ ಸಿಕ್ಕಿಲ್ಲ. ಸಮಾಜದ ವ್ಯವಸ್ಥೆ ಹಾಳಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿ ರಾಜಕೀಯದಲ್ಲಿ ಬೆರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಇದೇ ರೈತನ ಬೆನ್ನು ಮೂಳೆಯನ್ನೇ ಮುರಿದುಬಿಟ್ಟಿದ್ದಾರೆ. ಬಡವರು, ಮಹಿಳೆಯರು, ರೈತರಿಗೆ ನ್ಯಾಯವೇ ಸಿಗುತ್ತಿಲ್ಲ. ವಕೀಲ ವೃತ್ತಿ ಮಾಡುತ್ತಿರುವವರೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಗೋಪಾಲಗೌಡ ವಿಷಾದಿಸಿದರು.
ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮಾತನಾಡಿ, ರಾಜಕಾರಣಕ್ಕೆ ಬಂದವರು ಸಾವಿರಾರು ಎಕರೆ ಜಮೀನು ಮಾಡಿದ್ದನ್ನು ಕೇಳಿದ್ದೀನಿ. ಆದರೆ ಕೆ.ಸಿ.ರೆಡ್ಡಿ ಅವರು ರಾಜಕೀಯಕ್ಕೆ ಬಂದ ಮೇಲೆ ಎಲ್ಲವನ್ನೂ ಕಳೆದುಕೊಂಡರು. ಕೊನೆಯಲ್ಲಿ ಅವರ ಬಳಿ ಕೆಲವೇ ಎಕರೆ ಜಮೀನಿತ್ತು ಎಂದು ಹೇಳಿದರು. ನಾನು ಪ್ರಥಮವಾಗಿ ಅಂಚೆ ಇಲಾಖೆಯಲ್ಲೇ ಕೆಲಸ ಪ್ರಾರಂಭಿಸಿದೆ. ಇಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡೆ. ಇದೇ ಪ್ರಾಮಾಣಿಕತೆ ನನಗೆ ಮುಳುವಾಯಿತು. ರಾಜಕೀಯದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ ಎಂದು ವಿಷಾದಿಸಿದರು.
ಕೆ.ಸಿ.ರೆಡ್ಡಿ ಕುರಿತು ಜೆಡಿಯು ಮುಖಂಡ ಮಹಿಮಾ ಪಾಟೀಲ್ ಮಾತನಾಡಿದರು.
ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಕೆ.ಸಿ.ರೆಡ್ಡಿ ವೆಲ್‍ಫೇರ್ ಫೌಂಡೇಶನ್‍ನ ವಸಂತ ಶ್ರೀಕರ ಕೆ.ಸಿ.ರೆಡ್ಡಿ, ಮುಖ್ಯ ಪೆÇೀಸ್ಟ್ ಜನರಲ್ ಚಾಲ್ರ್ಸ್ ಲೋಗೋ, ಲೇಖಕ ಮೆ.ಮೋ. ಆಂಜನಪ್ಪ, ಪೆÇೀಸ್ಟ್ ಮಾಸ್ಟರ್ ಜನರಲ್ ಅರವಿಂದ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ