ಬಿಜೆಪಿ ವಿರುದ್ಧ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಕ್ರೋಶ
ಚಂಡೀಘಡ್:ಫೆ-27: ಅಳಿಯ ಗುರುಪಾಲ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಾಲ ವಂಚನೆ ಆರೋಪಕ್ಕೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿನಾಕಾರಣ ತಮ್ಮ ಅಳಿಯನ ಹೆಸರನ್ನು ವಂಚನೆ ಪ್ರಕರಣಕ್ಕೆ ಎಳೆದು ತಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅಮರಿಂದರ್ ಸಿಂಗ್ ಆರೋಪಿಸಿದ್ದಾರೆ.
ತನ್ನ ಅಳಿಯ ಅತ್ಯಂತ ಕಡಿಮೆ ಮಟ್ಟದ (ಶೇ. 12.5) ಪಾಲುದಾರರಾಗಿದ್ದಾರೆ. ಬ್ಯಾಂಕ್ನವರು ಕೋರ್ಟ್ನಲ್ಲಿ ವಂಚನೆ ಪ್ರಕರಣ ದಾಖಲಿಸುವ ಮುನ್ನವೇ ಗುರುಪಾಲ್ ಸಾಲ ಮರುಪಾವತಿಸಿದ್ದಾರೆ. 2015ರ ಮಾರ್ಚ್ 16ರಂದೇ ಗುರುಪಾಲ್ ಕಂಪನಿ ಸಾಲ ಮರುಪಾವತಿಸಿದೆ. ಈಗ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ಗುರುಪಾಲ್ ಪಾತ್ರವಿಲ್ಲ.
ಗುರುಪಾಲ್ ಬ್ಯಾಂಕ್ನ ಯಾವುದೇ ಸಾಲ ಪತ್ರಗಳಿಗೆ ಸಹಿ ಹಾಕಿಲ್ಲ. ವಿನಾಕಾರಣ ಅವರ ಹೆಸರನ್ನು ಎಳೆದು ರಾಜಕೀಯ ಮಾಡುಲಾಗುತ್ತಿದೆ ಎಂದು ಪಂಜಾಬ್ ಸಿಎಂ ಪ್ರತ್ಯಾರೋಪ ಮಾಡಿದ್ದಾರೆ. ನನ್ನ ಅಳಿಯ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿ ಹಗರಣವನ್ನು ನನ್ನ ಮೇಲೆ ಹೊರಿಸಲು ಸಂಚು ನಡೆಸುತ್ತಿದೆ ಎಂದು ಅಮರಿಂದರ್ ಸಿಂಗ್ ಗುಡುಗಿದ್ದಾರೆ. ಸಿಬಿಐ ಫೆ.22ರಂದು ಗುರುಪಾಲ್ ಸಿಂಗ್ ಸೇರಿದಂತೆ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.