ಪಾಕಿಸ್ತಾನ 400ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.

Kulgam: Soldiers during an operation launched after at least two Indian Army soldiers were killed and three wounded when militants attacked a military vehicle on the Jammu-Srinagar national highway in Kulgam district on June 3, 2017. (Photo: IANS)

ಶ್ರೀನಗರ/ನವದೆಹಲಿ, ಫೆ.27- ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತ-ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ತಲೆದೋರಿದ್ದು, ಮೊದಲ ಎರಡು ತಿಂಗಳ ಅವಧಿಯಲ್ಲೇ ಪಾಕಿಸ್ತಾನ 400ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.
57 ದಿನಗಳಲ್ಲಿ 400ಕ್ಕೂ ಹೆಚ್ಚು ಯುದ್ಧ ವಿರಾಮಗಳನ್ನು ಉಲ್ಲಂಘಿಸಿ ಪಾಕಿಸ್ತಾನ ಅಪ್ರಚೋದಿತ ದಾಳಿಗಳನ್ನು ನಡೆಸಿದೆ. ಪರಸ್ಪರ ದಾಳಿ-ಪ್ರತಿದಾಳಿಯಲ್ಲಿ ಪಾಕಿಸ್ತಾನದ 23 ಸೈನಿಕರು ಮತ್ತು ಭಾರತದ 16 ಯೋಧರು ಹತರಾಗಿದ್ದು, ಸಾರ್ವಜನಿಕರೂ ಸಹ ಮೃತಪಟ್ಟಿದ್ದಾರೆ.
ಈ ಆತಂಕಕಾರಿ ಬೆಳವಣಿಗೆ ಇದೇ ರೀತಿ ಮುಂದುವರಿದಿದ್ದೇ ಆದರೆ 2003ರ ನವೆಂಬರ್‍ನಿಂದ ಜಾರಿಯಲ್ಲಿರುವ ಕದನ ವಿರಾಮ ಒಪ್ಪಂದದ ಅತ್ಯಧಿಕ ಸಂಖ್ಯೆಯ ಉಲ್ಲಂಘನೆಯಾಗಲಿದೆ.
15 ವರ್ಷಗಳ ಹಿಂದೆ ಅಂದರೆ ನವೆಂಬರ್ 26,2003ರಲ್ಲಿ ಭಾರತ-ಪಾಕಿಸ್ತಾನ ನಡುವೆ ಜಮ್ಮು ಮತ್ತು ಕಾಶ್ಮೀರದ 198 ಕಿ.ಮೀ. ಅಂತಾರಾಷ್ಟ್ರೀಯ ಗಡಿಯಲ್ಲಿ, 778 ಕಿ.ಮೀ. ಗಡಿ ನಿಯಂತ್ರಣ ರೇಖೆಯಲ್ಲಿ ಹಾಗೂ 110 ಕಿ.ಮೀ. ವಾಸ್ತವ ನೆಲೆ ಸ್ಥಾನ ರೇಖೆಯಲ್ಲಿ (ಸಿಯಾಚಿನ್) ಕದನ ವಿರಾಮ ಜಾರಿಯಲ್ಲಿದೆ.
2017ರಲ್ಲಿ ಎಲ್‍ಒಸಿಯಲ್ಲಿ 860 ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ 120 ಬಾರಿ ಕದನ ವಿರಾಮಗಳು ಉಲ್ಲಂಘನೆಯಾಗಿದ್ದವು.
2016ರ ಸೆಪ್ಟೆಂಬರ್‍ನಲ್ಲಿ ಉರಿ ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 19 ಯೋಧರನ್ನು ಕೊಂದ ಕೃತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಆಕ್ರಮಿಕ ಕಾಶ್ಮೀರ(ಪಿಒಕೆ)ದ ನಾಲ್ಕು ಸ್ಥಳಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಅದಾದ ನಂತರ ಗಡಿ ಭಾಗದಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಾಗಿದೆ.
ಏತನ್ಮಧ್ಯೆ, ಪಾಕಿಸ್ತಾನದ ಪಿರ್ ಪಂಜಲ್ ವಲಯದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಸುಮಾರು 400 ಭಯೋತ್ಪಾದಕರು ಕಾಶ್ಮೀರ ಕಣಿವೆಯೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ