ಭಾರತ-ಕೋರಿಯಾ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಭಾರತ-ಕೋರಿಯಾ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ನವದೆಹಲಿ:ಫೆ-27: ಸುಸ್ಥಿರ ಆರ್ಥಿಕತೆಗೆ ತೊಡಕಾಗಿರುವ ಅನಿಯಂತ್ರಿತ ವ್ಯವಹಾರಿಕ ನಿರ್ಧಾರಗಳನ್ನು ತೆಗೆದು ಹಾಕಲಾಗುವುದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲಿ ಭಾರತ ಜಿಡಿಪಿ(ಒಟ್ಟು ರಾಷ್ಟ್ರೀಯ ಉತ್ಪನ್ನ)ಯಲ್ಲಿ ವಿಶ್ವದ 5ನೇ ರಾಷ್ಟ್ರವಾಗಿ ಹೊರಹೊಮ್ಮಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ-ಕೋರಿಯಾ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸುಸ್ಥಿರ ಆರ್ಥಿಕತೆ ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಭಾರತವನ್ನು ಹಳೆ ನಾಗರಿಕತೆಯಿಂದ ಅಧುನಿಕ ಸಮಾಜಕ್ಕೆ ಬದಲಾಯಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಭಾರತ ಹಾಗೂ ಕೋರಿಯಾ ಮಧ್ಯೆ ಸಾಕಷ್ಟು ಸಾಮ್ಯತೆಗಳನ್ನು ಕಾಣಬಹುದು. ಬುದ್ಧನಿಂದ ಹಿಡಿದು ಬಾಲಿವುಡ್ ವರೆಗು ನಂಟನ್ನು ಹೊಂದಿದ್ದೇವೆ. ಕೇಂದ್ರ ಸರ್ಕಾರ ಉದ್ಯಮ ನಿಯಮಗಳನ್ನು ಸಡಿಲಿಸಲಿದೆ. ಕೈಗಾರಿಕೋದ್ಯಮಗಳ ಪರವಾನಗಿ ಅವಧಿಯನ್ನು 3 ವರ್ಷಗಳಿಂದ 15 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ವಿಶ್ವದ ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ. ಜಗತ್ತಿನಲ್ಲಿ ಭಾರತವು ಅತ್ಯಂತ ಮುಕ್ತ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಜಗತ್ತಿನೊಂದಿಗೆ ವ್ಯವಹರಿಸಲು ಸಿದ್ಧವಾಗಿದೆ ಎಂದರು.

ಭಾರತ ಪ್ರಜಾಪ್ರಭುತ್ವ, ಜನಶಕ್ತಿ, ಬೇಡಿಕೆ ಮೂರನ್ನೂ ಹೊಂದಿರುವ ದೇಶವಾಗಿದೆ. ವಿಶ್ವದ ಕೆಲವೇ ರಾಷ್ಟ್ರಗಳು ಈ ಮೂರು ಪ್ರಮುಖ ವಿಷಯಗಳನ್ನು ಹೊಂದಿವೆ. ಸುಸ್ಥಿರ ಆರ್ಥಿಕತೆಗೆ ತೊಡಕಾಗಿರುವ ಅನಿಯಂತ್ರಿತ ವ್ಯವಹಾರಿಕ ನಿರ್ಧಾರಗಳನ್ನು ತೆಗೆದು ಹಾಕಲಾಗುವುದು ಎಂದು ತಿಳಿಸಿದರು. ಭಾರತದಲ್ಲಿ ಉತ್ತಮ ವ್ಯವಾರಿಕ ವಾತಾವರಣವನ್ನು ನಿರ್ಮಿಸಲು ಕೇಂದ್ರ ಸರ್ಕಾರ ದಿನೇ ದಿನೇ ಶ್ರಮಿಸುತ್ತಿದೆ.

ಭಾರತ ವಿಶ್ವದ ಮೂರನೇ ಅತಿ ದೊಡ್ಡ ಖರೀದಿಸುವ ಶಕ್ತಿಯುಳ್ಳ ರಾಷ್ಟ್ರವಾಗಿದೆ. ಶೀಘ್ರದಲ್ಲೇ ವಿಶ್ವದ 5ನೇ ಬಲಿಷ್ಠ ಆರ್ಥಿಕತೆವುಳ್ಳ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ನಮ್ಮ ಜಿಡಿಪಿ ದರ ಇತರೆ ದೇಶಗಳೆದುರು ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತದಲ್ಲಿ ಉದ್ಯಮ ಆರಂಭಿಸಲು ಅತ್ಯುತ್ತಮ ವಾತಾವರಣ ಮತ್ತು ಅವಕಾಶವಿದೆ ಎಂದರು.
………

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ