ಬಾಗಲಕೋಟ,27- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಗಲಕೋಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಭೂಮಿಪೂಜೆ, ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಸಾಧನಾ ಸಮಾವೇಶಕ್ಕೆ ನಾಳೆ ದಿನಾಂಕ 28-02-2018 ರಂದು ಬಾಗಲಕೋಟ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಬಿಟಿಡಿಎ ಸಭಾಪತಿ ಎ.ಡಿ.ಮೋಕಾಶಿ ತಿಳಿಸಿದರು.
ಸಾಧನಾ ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಸೇರುವ ನಿರೀಕ್ಷೆಯಿದ್ದು ಅದಕ್ಕಾಗಿ ಆಸನಗಳ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ನವನಗರದ ಯುನಿಟ್-2 ಮತ್ತು ಯುನಿಟ್-3ರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ನಾಳೆ ದಿ.28 ರಂದು ಮುಂಜಾನೆ 11 ಗಂಟೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವನಗರದ ಯುನಿಟ್-1 ನದಿ ತೀರದಿಂದ 521 ಮೀ.ಆರ್.ಎಲ್.ವರೆಗಿನ ವ್ಯಾಪ್ತಿಯ ಸಂತ್ರಸ್ಥರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಹಂತವು ಪೂರ್ಣಗೊಂಡಿದ್ದು ಮುಂದಿನ ನಿರ್ವಹಣೆಗಾಗಿ ನಗರಸಭೆಗೆ ಕಳೆದ ಡಿ.28ರಂದು ಹಸ್ತಾಂತರಿಸಲಾಗಿದೆ. ಯುನಿಟ್-2 521 ಮೀ.ಅರ್.ಎಲ್.ದಿಂದ 523 ಮೀ.ಅಥವಾ 100 ಮೀ.ಅಂತರದೊಳಗೆ ಬರುವ ಸಂತ್ರಸ್ಥರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಕೈಗೊಳ್ಳಲಾದ ಮೂಲಭೂತ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು ಸಂತ್ರಸ್ಥರಿಗೆ ಈಗಾಗಲೇ ನಿವೇಶನಗಳ ಹಂಚಿಕೆ ಮಾಡಲಾಗಿದೆ.
ಯುನಿಟ್-3 523 ಮೀ.ಆರ್.ಎಲ್ ದಿಂದ 525 ಮೀ.ವರೆಗಿನ ವ್ಯಾಪ್ತಿಯ ಸಂತ್ರಸ್ಥರನ್ನು ಸ್ಥಳಾಂತರಿಸಲು 1640 ಎಕರೆ ಕ್ಷೇತ್ರದ ಜಮೀನು ಭೂಸ್ವಾಧೀನ 200 ಎಕರೆಯಿಂದ 300 ಎಕರೆ 1 ಬ್ಲಾಕ್ದಂತೆ ಒಟ್ಟಾರೆ 5ಬ್ಲಾಕ್ ಗಳನ್ನೊಳಗೊಂಡ ಆಧುನಿಕ ಮಾದರಿಯ ಯುನಿಟ್-3ರ ಲೇಔಟ ನಕ್ಷೆಗೆ ಪ್ರಾಧಿಕಾರದ ಬೋರ್ಡ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದರು.
ಈ ಸಂದರ್ಭದಲ್ಲಿ ಬಿಟಿಡಿಎ ಸದಸ್ಯರಾದ ಆನಂದ ಜಿಗಜಿನ್ನಿ, ಬಸವರಾಜ ಬದಾಮಿ, ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಸೀಲ್ದಾರ ವಿನಯಕುಮಾರ ಪಾಟೀಲ, ಬಿಟಿಡಿಎ ಮುಖ್ಯ ಅಭಿಯಂತರ ರವೀಂದ್ರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಬಿಟಿಡಿಎ ಅಧಿಕಾರಿಗಳು ಹಾಜರಿದ್ದರು.