ಮದುವೆಯಾಗಲು ನಿರಾಕರಿಸಿದ ಬಾಲಕಿಯನ್ನು ಚಾಕು ತಿಳಿದ ಅಪರಾಧಿಗೆ 5 ವರ್ಷ ಶಿಕ್ಷೆ

ಕೋಲಾರ: ಮದುವೆಯಾಗಲು ನಿರಾಕರಿಸಿದ ಬಾಲಕಿಯನ್ನು ಚಾಕುವಿನಿಂದ ತಿಳಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಅಪರಾಧಿಗೆ 5 ವರ್ಷ ಶಿಕ್ಷೆ ವಿಧಿಸಿ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ 2014ರ ನವೆಂಬರ್ 4ರಂದು ಅಡವಿಚಂಬಕೋನಿ ಗ್ರಾಮದ ಬಾಲಕಿಯೊಬ್ಬಳು ಕೊಳಗುರ್ಕಿ ಕೆರೆಯ ಮಣ್ಣು ರಸ್ತೆಯಲ್ಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ಪರಿಚಿತ ಗೋವಿಂದು (26) ಬಾಲಕಿಯನ್ನು ಅಡ್ಡಗಟ್ಟಿ ತಾನು ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಬಾಲಕಿ ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ನಡೆದಿದೆ.
ಇದರಿಂದ ಕೋಪಗೋಂಡ ಗೋವಿಂದು ಪೂರ್ವಸಿದ್ಧತೆ ಮಾಡಿಕೊಂಡಿದ್ದ ಚಾಕುವಿನಿಂದ ಬಾಲಕಿಯ ಕತ್ತು ಹಾಗೂ ಹೊಟ್ಟೆಗೆ ತಿವಿದು ಪರಾರಿಯಾಗಿದ್ದ. ಗಾಯಾಳು ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸಬ್ ಇನ್ಸ್‍ಪೆಕ್ಟರ್ ಉಮಾಶಂಕರ್ ತನಿಖೆ ಕೈಗೊಂಡು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆದು ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಬಿ.ಎಸ್. ರೇಖಾ ಅವರು ಈ ಶಿಕ್ಷೆ ಪ್ರಕಟಿಸಿದ್ದಾರೆ. ಸಂತ್ರಸೆಯ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ರಂಗಸ್ವಾಮಿ ವಾದಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ