ಸವಿರುಚಿ ಸಂಚಾರಿ ಕ್ಯಾಂಟೀನ್ ಹಾಗೂ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ ಸಿಎಂ ಚಾಲನೆ
ಬೆಂಗಳೂರು, ಫೆ.27-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸವಿರುಚಿ ಸಂಚಾರಿ ಕ್ಯಾಂಟೀನ್ ಲೋಕಾರ್ಪಣೆ ಹಾಗೂ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಕ್ಯಾಂಟೀನ್ಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಒಕ್ಕೂಟ ಸವಿರುಚಿ ಸಂಚಾರಿ ಕ್ಯಾಂಟೀನ್ ಪ್ರಾರಂಭವಾಗಲಿದೆ. ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ತಿಂಡಿ, ಊಟವನ್ನು ರಿಯಾಯ್ತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತವೆ. ಇದರಿಂದ ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣವಾದರೆ ಬಡವರಿಗೆ ಊಟ, ತಿಂಡಿ ದೊರೆಯಲಿದೆ ಎಂದರು.
ಪ್ರತಿ ಮಹಿಳಾ ಒಕ್ಕೂಟಕ್ಕೆ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಿದ್ದು, ಆ ಹಣದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ನನ್ನು ಪ್ರಾರಂಭಿಸಲಸಾಗುತ್ತಿದೆ ಎಂದು ತಿಳಿಸಿದರು.
ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ವಿಕಲಚೇತನರಿಗೆ 4ಸಾವಿರ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ನೀಡಲಾಗುತ್ತಿದೆ ಎಂದರು.
ಇಂದು ಸಾಂಕೇತಿಕವಾಗಿ 16ಸವಿರುಚಿ ಸಂಚಾರಿ ಕ್ಯಾಂಟೀನ್ ಹಾಗೂ 100 ಯಂತ್ರ ಚಾಲಿತ ದ್ವಿಚಕ್ರ ವಾಹನಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಉಮಾಶ್ರೀ, ಎಚ್.ಎಂ.ರೇವಣ್ಣ, ಕೆ.ಜೆ.ಜಾರ್ಜ್, ಮೇಯರ್ ಆರ್.ಸಂಪತ್ರಾಜ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನಕಾರ್ಯದರ್ಶಿ ಉಮಾಮಹದೇವನ್, ನಿರ್ದೇಶಕಿ ದೀಪಾಚೋಳನ್ ಉಪಸ್ಥಿತರಿದ್ದರು.