ನವದೆಹಲಿ, ಫೆ.26-ಡೈಮಂಡ್ ಕಿಂಗ್ ನೀರವ್ ಮೋದಿ, ರೋಟಮ್ಯಾಕ್ ಪೆನ್ ಪ್ರವರ್ತಕ ವಿಕ್ರಮ್ ಕೊಠಾರಿ, ದಾಸ್ ಕಂಪನಿಯ ವಜ್ರ ವ್ಯಾಪಾರಿಗಳ ಬಹುಕೋಟಿ ರೂ.ಗಳ ವಂಚನೆ ಪ್ರಕರಣಗಳ ನಂತರ ಈಗ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ.
97 ಕೋಟಿ ರೂ.ಗಳ ಸಾಲ ವಂಚನೆ ಪ್ರಕರಣದ ಸಂಬಂಧ ಸಿಂಬೌಲಿ ಶುಗರ್ಸ್ ಲಿಮಿಟೆಡ್ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುರ್ಮಿತ್ ಸಿಂಗ್ ಮಾನ್ ಉಪ ವ್ಯವಸ್ಥಾಪಕ ನಿರ್ದೇಶಕ ಗುರ್ಪಾಲ್ ಸಿಂಗ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ-ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿನ ಅನೇಕ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಉತ್ತರಪ್ರದೇಶದ ಸಿಂಬೌಲಿ, ಹಾಪುರ್, ಗಾಜಿಯಾಬಾದ್ ಈ ಪ್ರದೇಶಗಳಲ್ಲಿರುವ ಖಾಸಗಿ ಸಕ್ಕರೆ ಕಂಪನಿ ವಿರುದ್ಧ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ದೂರು ದಾಖಲಿಸಿದ ನಂತರ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಸಂಸ್ಥೆಯ ಮಾಲೀಕರು, ಉನ್ನತಾಧಿಕಾರಿಗಳು ಮತ್ತು ಸಿಬ್ಬಂದಿ ಬ್ಯಾಂಕ್ಗೆ ಇಚ್ಚಾಪೂರ್ವಕ ಸಾಲ ಸುಸ್ತಿದಾರರಾಗಿದ್ದು, ಭಾರೀ ನಷ್ಟ ಉಂಟು ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.