ಬೆಂಗಳೂರು,ಫೆ.26-ಮಾಜಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಮತ್ತು ಮಾನಪ್ಪ ವಜ್ಜಲ್ ಅವರು ತಮ್ಮ ಶಾಸಕತ್ವದ ರಾಜೀನಾಮೆ ಪತ್ರ ಅಂಗೀಕಾರವಾಗುವ ಮುನ್ನವೇ ಬಿಜೆಪಿ ಸೇರಿರುವ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ದೂರು ನೀಡಿದರೂ ನಮಗೆ ನ್ಯಾಯ ದೊರೆತಿಲ್ಲ ಹಾಗಾಗಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ಜನವರಿ 18ರಂದು ಶಿವರಾಜ್ ಪಾಟೀಲ್, ಮಾನಪ್ಪ ವಜ್ಜಲ್ ಬಿಜೆಪಿ ಸೇರಿದ್ದಾರೆ. ಅವರ ರಾಜೀನಾಮೆ ಪತ್ರ ಅಂಗೀಕಾರವಾಗಿರುವುದು ಜ.22ರಂದು. ಆದರೆ ರಾಜೀನಾಮೆ ಅಂಗೀಕರವಾಗುವ ಮುನ್ನವೇ ಬಿಜೆಪಿ ಸೇರ್ಪಡೆಯಾಗಿದ್ದು, ಈ ಸಂಬಂಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಜ.19ರಂದು ಸಭಾಧ್ಯಕ್ಷರಿಗೆ ದೂರು ನೀಡಲಾಗಿತ್ತು. ದೂರುದಾರರ ಯಾವುದೇ ಹೇಳಿಕೆಯನ್ನು ಸಭಾಧ್ಯಕ್ಷರು ಪಡೆಯದೆ ಆ ಇಬ್ಬರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದ್ದು, ನ್ಯಾಯ ಒದಗಿಸಬೇಕೆಂದು ಮತ್ತೊಮ್ಮೆ ಸಭಾಧ್ಯಕ್ಷರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದರು.
ಶಿವರಾಜ್‍ಪಾಟೀಲ್ ಮತ್ತು ಮಾನಪ್ಪ ವಜ್ಜಲ್ ಜೆಡಿಎಸ್‍ನಿಂದ ಸ್ಫರ್ಧಿಸಿ ಚುನಾಯಿತರಾಗಿದ್ದರು. ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಪಕ್ಷಾಂತರವಾಗಿರುವುದು ಜೆಡಿಎಸ್ ಪಕ್ಷಕ್ಕೆ ಮತ್ತು ಆ ಕ್ಷೇತ್ರದ ಮತದಾರರಿಗೆ ಬಗೆದ ದ್ರೋಹವಾಗಿದೆ. ಸಭಾಧ್ಯಕ್ಷರಿಂದಲೂ ಸೂಕ್ತ ನ್ಯಾಯ ದೊರೆತಿಲ್ಲ ಎಂದರು.
1996ರಲ್ಲಿ ಹರಿಯಾಣದಲ್ಲಿ ಇಂಥದ್ದೇ ಪ್ರಕರಣ ಜರುಗಿದ್ದು, ಅಲ್ಲಿ ದೂರುದಾರರ ಪರವಾಗಿ ನ್ಯಾಯ ದೊರಕಿತ್ತು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಜೆಡಿಎಸ್ ಮುಖಂಡರಾದ ಆದಿಶೇಷಯ್ಯ, ಚಂದ್ರಶೇಖರ್ ಉಪಸ್ಥಿತರಿದ್ದರು.