ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ನಂಬಿಕೆ ಮತ್ತು ಅದರಾಚೆಗೆ ಕುರಿತ ಜಾಗತಿಕ ಸಮಾವೇಶ

ಬೆಂಗಳೂರು,ಫೆ.26-ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ನಂಬಿಕೆ ಮತ್ತು ಅದರಾಚೆಗೆ ಕುರಿತ ಜಾಗತಿಕ ಸಮಾವೇಶವನ್ನು ಮಾ.8 ಮತ್ತು 9ರಂದು ರೇಸ್‍ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಅಂತರಿಕ್ಷ ಇಲಾಖೆ/ಇಸ್ರೋ ಕಾರ್ಯದರ್ಶಿ ಡಾ.ಕೆ.ರಾಧಾಕೃಷ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಸೈ ತಂಡದ ಮುಖ್ಯಸ್ಥ ಸಾಲಾಟನ್ ಬಲೆ ನಟುಟು ವಿದ್ವಾಂಸ ಆಂಡ್ರ್ಯೂ ಫಾಸ್ ಆಧ್ಯಾತ್ಮಿಕ ನಾಯಕ ಮಮ್ತಾಜ್ ಆಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 9.30ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಸಮಾವೇಶ ಕುರಿತು ಮಾತನಾಡಲಿದ್ದು, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಪ್ರಾಸ್ತಾವಿಕ ಭಾಷಣ, ಬೆಳಗ್ಗೆ 11.30ಕ್ಕೆ ಟೊಕಿಯೋದ ರೇ ಚಂದ್ರನ್ ಅವರಿಂದ ಕಾಸ್ಮಿಕ್ ಎನರ್ಜಿ ಮತ್ತು ಸ್ವ-ಚಿಕಿತ್ಸಾ ವಿಧಾನಗಳು ಕುರಿತು ಮಾತನಾಡಲಿದ್ದಾರೆ.

ಮಧ್ಯಾಹ್ನ 12.10ಕ್ಕೆ ಸಾಲಾಟನ್ ಒಲೆ ನಟುಟು ಅವರಿಂದ ಆಫ್ರಿಕಾ ಬುಡಕಟ್ಟು ಜನಾಂಗದಲ್ಲಿ ಪ್ರಕೃತಿಯ ಕುರಿತು ಸಂವಹನ, 2 ಗಂಟೆಗೆ ಶ್ರೀ ರಾಮಚಂದ್ರ ಗುರೂಜಿ ಅವರಿಂದ ನಮ್ಮೊಳಗಿನ ನಿಗೂಡವಾದ ಗುಣಪಡಿಸುವ ಶಕ್ತಿ ಭಾಗ-1 ಉಪನ್ಯಾಸ, ಡಾ.ವೀರೇಂದ್ರ ಹೆಗಡೆ ಅವರಿಂದ 3.20ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ನಂಬಿಕೆ ಮತ್ತು ಆಚರಣೆಗಳು ಸಂಜೆ.4.15ಕ್ಕೆ ನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರಾಚೆಗೆ ಕುರಿತು ಮಮ್ತಾಜ್ ಆಲಿ ಮಾತನಾಡಲಿದ್ದಾರೆ.

ಮಾ.9ರಂದು ಬೆಳಗ್ಗೆ ಡಾ.ಆಂಡ್ರ್ಯೂ ಫಾಸ್ ಅವರಿಂದ ಯೋಗದ ಪದ್ಧತಿಗಳು: ವೈದೀಕ ಜ್ಯೋತಿಷ್ಯದಿಂದಾಚೆಗೆ, 9.40ಕ್ಕೆ ಪಂಚಾ ಭಾಸ್ಕರ್ ಭಟ್ ಅವರಿಂದ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕುರಿತ ನಂಬಿಕೆ, ಸಂಜೆ. 5.25ಕ್ಕೆ ನಮ್ಮೊಳಗಿನ ನಿಗೂಢವಾದ ಗುಣಪಡಿಸುವ ಶಕ್ತಿ ಭಾಗ-2 ಹಾಗೂ ಸಂಜೆ.6.25ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ನ್ಯಾಯಮೂರ್ತಿ ಜಸ್ಟೀಸ್ ಬಿ.ಎನ್.ಶ್ರೀಕೃಷ್ಣ ಅವರು ಸಂವಿಧಾನ ಮತ್ತು ನಂಬಿಕೆಗಳು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಂಜೆ 7.05ಕ್ಕೆ ಧರ್ಮಸ್ಥಳ ಯಕ್ಷಗಾನ ಮಂಡಳಿ ಕಲಾವಿದರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ