ನವದೆಹಲಿ, ಫೆ.26-ದೇಶದಲ್ಲಿನ ಸುಮಾರು 9,500 ಬ್ಯಾಂಕಿಂಗ್ ಸೌಲಭ್ಯ ರಹಿತ ಹಣಕಾಸು ಸಂಸ್ಥೆಗಳನ್ನು(ಎನ್ಬಿಎಫ್ಸಿಗಳು) ಹೈ ರಿಸ್ಕ್ (ಅಧಿಕ ಗಂಡಾಂತರ) ಅಕ್ರಮ ಹಣಕಾಸು ಸಂಸ್ಥೆಗಳೆಂದು ವರ್ಗೀಕರಿಸಿರುವ ವಿತ್ತ ಸಚಿವಾಲಯದ ಆರ್ಥಿಕ ಗುಪ್ತಚರ ಘಟಕ(ಎಫ್ಐಯು) ಅವುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹಣಕಾಸು ಅವ್ಯವಹಾರ ತಡೆ ಕಾಯ್ದೆಯ ನಿಯಮಗಳಿಗೆ ಬದ್ಧವಾಗಿರದ ಮತ್ತು ನಿಬಂಧನೆಗಳು ಪಾಲಿಸದ ಕಂಪನಿಗಳನ್ನು ಅಧಿಕ ಗಂಡಾಂತರದ ಸಂಸ್ಥೆಗಳು ಎಂದು ಪರಿಗಣಿಸಲಾಗುತ್ತದೆ. ಜನವರಿ 31ರಂತೆ ದೇಶದಲ್ಲಿ ಇಂಥ 9,500 ಹೈ ರಿಸ್ಕ್ ಸಂಸ್ಥೆಗಳನ್ನು ಗುರುತಿಸಲಾಗಿದೆ.
ಇಂಥ ಎನ್ಬಿಎಫ್ಸಿ ಕಂಪನಿಗಳಲ್ಲಿ ಬಹುತೇಕ ಸಂಸ್ಥೆಗಳು, ಠೇವಣಿಗಳಾಗಿ ಸ್ವೀಕರಿಸಿ, ನೋಟು ಅಮಾನ್ಯೀಕರಣದ ನಂತರ ನಿಷೇಧಿತ ಕರೆನ್ಸಿ ನೋಟುಗಳನ್ನು ಪರಿವರ್ತಿಸಿರುವುದು ಪತ್ತೆಯಾಗಿದೆ ಹಾಗೂ ಇವು ಈ ವ್ಯವಹಾರಕ್ಕಾಗಿ ಹಿಂದಿನ ದಿನಾಂಕದ ನಿಗದಿತ ಠೇವಣಿ (ಎಫ್ಡಿ) ಮತ್ತು ಚೆಕ್ಕುಗಳನ್ನು ನೀಡಿ ಅವ್ಯವಹಾರದಲ್ಲಿ ತೊಡಗಿರುವುದು ಪತ್ತೆಯಾಗಿದೆ.
2016ರ ನವೆಂಬರ್ 8ರಂದು 500 ರೂ.ಗಳು ಮತ್ತು 1,000 ರೂ.ಗಳ ಮುಖಬೆಲೆ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸಿತ್ತು. ಕಾಳಧನ ಮತ್ತು ಅಘೋಷಿತ ಆದಾಯ ಹೊಂದಿದ್ದ ಅನೇಕ ಮಂದಿ ನಿಷೇಧಿತ ಕರೆನ್ಸಿ ನೋಟುಗಳನ್ನು ಅಕ್ರಮವಾಗಿ ಪರಿವರ್ತಿಸಿದ್ದು, ಈ ಅವ್ಯವಹಾರಗಳಿಗೆ ಎನ್ಬಿಎಫ್ಸಿಗಳು ಹಾಗೂ ಗ್ರಾಮೀಣ ಮತ್ತು ನಗರ ಸಹಕಾರಿ ಬ್ಯಾಂಕುಗಳು ಸಾಥ್ ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಇವುಗಳ ಮೇಲೆ ಹದ್ದಿನ ಕಣ್ಣಿನ ನಿಗಾ ವಹಿಸಿ ಕೂಲಂಕಷ ಪರಿಶೀಲನೆ ನಡೆಸಿತ್ತು.
ಇಂಥ ಎನ್ಬಿಎಫ್ಸಿಗಳು ಮತ್ತು ಸಹಕಾರಿ ಬ್ಯಾಂಕ್ಗಳು ನಿಷೇಧಿತ ಕರೆನ್ಸಿ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಿ ಹಿಂದಿನ ದಿನಾಂಕದ ಎಫ್ಡಿ ಮತ್ತು ಚೆಕ್ಕುಗಳನ್ನು ನೀಡಿರುವುದು ಪತ್ತೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂಥ ಠೇವಣಿಗಳಿಗೆ ನಿಯಂತ್ರಣ ಹೇರಿದ್ದರೂ ದೊಡ್ಡ ಮಟ್ಟದಲ್ಲಿ ಅಕ್ರಮ-ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ.
ಪಿಎಂಎಲ್ ಕಾಯ್ದೆಯ ನಿಯಮಗಳ ಪ್ರಕಾರ, ಎಲ್ಲ ಎನ್ಬಿಎಫ್ಸಿಗಳು ತನ್ನ ಹಣಕಾಸು ಸಂಸ್ಥೆಯಲ್ಲಿ ಪ್ರಧಾನ ಅಧಿಕಾರಿಯನ್ನು ನೇಮಿಸಬೇಕು ಹಾಗೂ ಎಲ್ಲ ಅನುಮಾನಾಸ್ಪದ ಹಾಗೂ 10 ಲಕ್ಷ ಮೇಲ್ಪಟ್ಟ ನಗದು ವಹಿವಾಟುಗಳನ್ನು ಎಫ್ಐಯುಗೆ ವರದಿ ಮಾಡಬೇಕು. ಆದರೆ ಇವುಗಳು ಎಲ್ಲ ನೀತಿ-ನಿಯಮ-ನಿಬಂಧನೆಗಳನ್ನು ಗಾಳಿಗೆ ತೂರಿ ದೊಡ್ಡ ಮಟ್ಟದಲ್ಲಿ ಅವ್ಯವಹಾರಗಳನ್ನು ನಡೆಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದ್ದು, ಬ್ರಹ್ಮಾಂಡ ಅವ್ಯವಹಾರಗಳನ್ನು ನಡೆಸಿರುವ ಕಂಪನಿಗಳಿಗೆ ಕಂಟಕವಾಗಲಿದೆ.