ಚಿಂತಾಮಣಿ, ಫೆ.26- ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಸ್ಪರ್ಧಾ ಆಕಾಂಕ್ಷಿಗಳು ಮತ ಬೇಟೆಗಾಗಿ ನಾನಾ ಕಸರತ್ತು ಪ್ರಾರಂಭಿಸಿದ್ದಾರೆ. ಮಾಜಿ ಹಾಗೂ ಹಾಲಿ ಶಾಸಕರುಗಳ ನಡುವೆ ಕಾಲೆಳೆಯುವ ಆಟ ಜೋರಾಗಿದ್ದು , ಮಾಜಿ ಶಾಸಕರೊಬ್ಬರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನೇ ಸಾಕ್ಷ್ಯಚಿತ್ರದ ಮೂಲಕ ಹೊರ ತಂದು ಕ್ಷೇತ್ರದ ಮತದಾರರನ್ನು ಸೆಳೆಯಲು ಈ ನೂತನ ಪ್ರಯೋಗ ಮಾಡಿದ್ದಾರೆ.
ಪಟ್ಟಣದ ಚೇಳೂರು ರಸ್ತೆಯಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರು ಹಮ್ಮಿಕೊಂಡಿದ್ದ ಬೃಹತ್ ಸ್ವಾಭಿಮಾನಿ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದ್ದು , ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಂದ ಸಾಕ್ಷ್ಯ ಚಿತ್ರವನ್ನು ಅನಾವರಣಗೊಳಿಸಲಾಯಿತು.
ಈ ವೇಳೆ ಮಾಜಿ ಶಾಸಕರು ಮಾತನಾಡಿ, ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ ಈ ಮಣ್ಣಿನ ಸಂಸ್ಕøತಿ ತಿಳಿದಿದೆ. ಆದ್ದರಿಂದ ಈ ಮಣ್ಣಿನ ಋಣ ತೀರಿಸಲು ನಾನು ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.
ನನ್ನ ಅಧಿಕಾರಾವಧಿಯಲ್ಲಿ ಸರ್ಕಾರದಿಂದ ಹೊರ ದೇಶಕ್ಕೆ ಮೋಜು ಮುಸ್ತಿಗೆ ಹೋಗದೆ ನನ್ನ ಕ್ಷೇತ್ರಕ್ಕೆ ಆ ದೇಶದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅದನ್ನು ಅಭಿವೃದ್ಧಿಗೆ ಹೊಂದಿಕೆ ಆಗುವಂತೆ ಅದರ ಕಲ್ಪನೆ ಮೂಡಿಸಿ ಕಾರ್ಯ ರೂಪಕ್ಕೆ ತಂದಿದ್ದೇನೆ. ಗ್ರಾಮೀಣ ಜೀವನ ಶೈಲಿಯನ್ನೇ ಬದಲಾಯಿಸಿದೇ, ಗ್ರಾಮೀಣ ಪ್ರದೇಶಕ್ಕೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ವಿವಿಧ ಯೋಜನೆಗಳಲ್ಲಿ ಹೆಚ್ಚುವರಿ ಹಣವನ್ನು ಸರಕಾರದಿಂದ ತಂದು ಗ್ರಾಮೀಣ ಪ್ರದೇಶವನ್ನು ಅಭಿವೃದ್ದಿಪಡಿಸಿದ್ದೇನೆ ಎಂದರು.
ಹಾಲಿ ಶಾಸಕರು ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಜನತೆಗೆ ಸ್ವಾತಂತ್ರವಿಲ್ಲವೆನ್ನುತ್ತಾರೆ. ಪಾಪ ಅವರಿಗೆ ರಿಪಬ್ಲಿಕ್ ಡೇ ಬಗ್ಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾವ ರೀತಿಯಾದರೂ ಮಾತನಾಡಬಹುದು ಹಾಗೂ ಏನು ಬೇಕಾದರೂ ಮಾತನಾಡಬಹುದು ಎಂದು ಆರೋಪಿಸಿದರು.
ಯುವ ಪೀಳಿಗೆಯ ಹೊಸ ಮತದಾರರಿಗೆ ಅಭಿವೃದ್ಧಿ ಮಾಹಿತಿಗಳ ಕೊರತೆ ನೀಗಿಸಲು ಇಂದಿನ ತಂತ್ರಜ್ಞಾನ ಮೂಲಕ ಸಾಕ್ಷ್ಯ ಚಿತ್ರವನ್ನು ಮಾಡಿ ಅದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೆಂದಿದೆ. ಆದರೆ ಈ ಸಾಕ್ಷ್ಯಚಿತ್ರವನ್ನು ಕೆಲವರ ಒತ್ತಾಯದ ಮೇರೆಗೆ ಬೃಹತ್ ಸ್ವಾಭಿಮಾನಿ ಸಮಾವೇಶದ ಮೂಲಕ ಮಾಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಸಿ.ಬಾಲಾಜಿ, ಮಾಜಿ ಗೃಹ ಸಚಿವರಾದ ಚೌಡರೆಡ್ಡಿ, ಶಾಂತಮ್ಮ ಚೌಡರೆಡ್ಡಿ, ಮಾಜಿ ಎಂ.ಎಲ್.ಸಿ ಸುಬ್ಬಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಎಲ್ಲಾ ಚುನಾಯಿತ ಪ್ರತಿನಿಧಿಗಳು ವಿವಿಧ ಮುಖಂಡರು ಕಾರ್ಯಕರ್ತರು ಹಾಜರಿದ್ದರು.