ಬೆಂಗಳೂರು, ಫೆ.26-ಕೆಫೆ, ಕಾಫಿಡೇ ಸೇರಿದಂತೆ ವಹಿವಾಟಿನಲ್ಲಿ ತೊಡಗಿರುವ ಹಲವು ಸಂಸ್ಥೆಗಳು ವಿದೇಶಿ ಸಂಸ್ಕøತಿ ಪ್ರತಿಬಿಂಬಿಸುವ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಕನ್ನಡದಲ್ಲೇ ನಾಮಫಲಕ ಪ್ರದರ್ಶಿಸುವ ಮೂಲಕ ಕನ್ನಡ ನಾಡು, ನುಡಿಗೆ ಗೌರವ ತೋರಬೇಕೆಂದು ಭಾರತ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಭರತ್ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಗ್ಲ ನಾಮಫಲಕ ಹಾಕಿರುವ ವಹಿವಾಟು ಸಂಸ್ಥೆಗಳು ಕಡ್ಡಾಯವಾಗಿ ಕನ್ನಡದ ನಾಮಫಲಕವನ್ನು ದೊಡ್ಡ ಅಕ್ಷರಗಳಲ್ಲಿ ಹಾಕಬೇಕೆಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ. ಕೂಡಲೇ ಎಚ್ಚೆತ್ತು ಕನ್ನಡ ನಾಮಫಲಕಗಳನ್ನು ಹಾಕದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆಲವು ಅಂಗಡಿ ಮುಂಗಟ್ಟುಗಳು, ಶಾಪಿಂಗ್ ಮಾಲ್ಗಳು ನಾಮಕಾವಸ್ಥೆಗೆ ಎಂಬಂತೆ ಅತಿ ಸಣ್ಣ ಅಕ್ಷರಗಳಲ್ಲಿ ಕನ್ನಡ ನಾಮಫಲಕಗಳನ್ನು ಹಾಕಲಾಗಿರುತ್ತದೆ. ಅದರ ಬದಲು ಕನ್ನಡವೇ ಪ್ರಧಾನವಾಗಿ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಹಾಕಬೇಕೆಂದು ಒತ್ತಾಯಿಸಿದರು.