ಶ್ರೀದೇವಿ ಸತ್ತದ್ದು ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ !

ಅಬುಧಾಬಿ: ಬಾಲಿವುಡ್‌ ನಟಿ ಶ್ರೀದೇವಿ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದೆ. ಮರಣೋತ್ತರ ವರದಿಯ ಪ್ರಕಾರ ಆಕೆ ಸತ್ತದ್ದು ಬಾತ್‌ ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಎಂದು ಯುಎಇ ಗಲ್ಫ್ ನ್ಯೂಸ್‌ ವರದಿ ಮಾಡಿದೆ.

ನಟಿ ಶ್ರೀದೇವಿಯ ದೇಹದಲ್ಲಿ ಆಲ್ಕೋಹಾಲ್‌ ಪತ್ತೆಯಾಗಿದೆ ಎಂದೂ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಯುಎಇ ಗಲ್ಫ್ ನ್ಯೂಸ್‌ ಹೇಳಿದೆ.

ನಟಿ ಶ್ರೀದೇವಿ ಅವರ ಸಾವು ಹೃದಯ ಸ್ತಂಭನದಿಂದ ಆಯಿತೆಂದು ಈ ಮೊದಲಿನ ವರದಿಗಳು ತಿಳಿಸಿದ್ದವು. ಆದರೆ ಈಗ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ಕುರಿತಾಗಿ ತದ್ವಿರುದ್ಧ ವರದಿಗಳು ಬಂದಿರುವುದು ಆಕೆಯ ಕುಟುಂಬದವರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಅತ್ಯಂತ ಆಘಾತಕಾರಿಯಾಗಿದೆ.

ನಟಿ ಶ್ರೀದೇವಿ ಬಾತ್‌ ಟಬ್‌ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವಲ್ಲಿ  ಯಾವುದೇ ಕ್ರಿಮಿನಲ್‌ ಉದ್ದೇಶ ಇಲ್ಲ ಎಂದು ಫೊರೆನ್ಸಿಕ್‌ ವರದಿ ಹೇಳಿರುವುದಾಗಿ ಯುಎಇ ಗಲ್ಫ್ ನ್ಯೂಸ್‌ ವರದಿ ಮಾಡಿದೆ.

ದುಬೈನ ಜನರಲ್‌ ಡಿಪಾರ್ಟ್‌ಮೆಂಟ್‌ ಆಫ್‌ ಫೋರೆನ್ಸಿಕ್‌ನಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರ್ಥಿವ ಶರೀರವನ್ನು ಪೊಲೀಸರಿಗೆ ಒಪ್ಪಿಸಿ ಕೆಲವು ದಾಖಲೆಗಳ ತಪಾಸಣೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಆ ನಂತರ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ದುಬೈ ಕಾನೂನಿನ ಪ್ರಕಾರ ಶವ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ನೀಡುವ ವ್ಯವಸ್ಥೆ ಇದೆ.

ದುಬೈನಿಂದ ಶ್ರೀದೇವಿ ಪಾರ್ಥಿವ ಶರೀರವನ್ನು ಅನಿಲ್‌ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ಮುಂಬೈಗೆ ಕರೆತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ