ಬೆಂಗಳೂರು, ಫೆ.25- ದೇಶಕ್ಕೆ ಬೇಕಾದ ಸಮಗ್ರ ಕಲ್ಪನೆ ಕೊಡುವ ನಿಟ್ಟಿನಲ್ಲಿ ಕೌಶಲ್ಯ ಭಾರತ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ಕುಮಾರ್ ಹೆಗಡೆ ತಿಳಿಸಿದರು.
ಡಾ.ಎಚ್.ಎಂ.ಪ್ರಸನ್ನ ಫೌಂಡೇಶನ್, ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ, ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ ಆಶ್ರಯದಲ್ಲಿ ಮಹಾಲಕ್ಷ್ಮಿಲೇಔಟ್ನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಯುವ ಶಕ್ತಿಯ ಸಬಲೀಕರಣ-ಕೌಶಲ್ಯ ಸಾಕಾರದ ಸಮ್ಮಿಲನ ಒಂದು ಅಪೂರ್ವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವ ವಿಜೇತ ಮಾನಸಿಕತೆಯ ಕೌಶಲ್ಯ ಬೇಕಾಗಿದೆಯೇ ಹೊರತು ಭೌಗೊಳಿಕ ಚೌಕವೇ ರಾಷ್ಟ್ರೀಯತೆಯಲ್ಲ. ಸಮಗ್ರ ವ್ಯಕ್ತಿತ್ವವೇ ರಾಷ್ಟ್ರೀಯತೆ ಎಂದರು.
ದೇಶದ ಜನರಲ್ಲಿರುವ ಕೀಳರಿಮೆಯನ್ನು ದೂರ ಸರಿಸಿ ಅಂತಃಸತ್ವವನ್ನು ಬಡಿದೆಬ್ಬಿಸುವ ಕೌಶಲ್ಯ ಬೇಕಾಗಿದೆ. ಆಗ ಜಗತ್ತು ಭಾರತದ ಕಾಲ ಕೆಳಗೆ ನಿಲ್ಲುತ್ತದೆ. ಯಂತ್ರ ಆಧಾರಿತ ಕೆಲಸ ಬೇಕೋ ಎಂಬುದನ್ನು ಜನರೇ ನಿರ್ಧರಿಸಲಿ. ವಿಶ್ವದರ್ಜೆ ಮಾನ್ಯತೆ ಕೊಡುವ ಕೌಶಲ್ಯತೆಯ ಮೂಲ ನೆಲೆ ಭಾರತ ಎಂಬುದನ್ನು ವಿಜ್ಞಾನಿ ಹೇಳಿದ್ದಾರೆ.
ವಿಶ್ವಕ್ಕೆ ಶೂನ್ಯದ ಮಹತ್ವದ ಅರಿವು ಮಾಡಿಕೊಟ್ಟಿದ್ದು ಭಾರತ. ಈ ವಿಚಾರವನ್ನು ನಾವು ಹೇಳಿದರೆ ಬೇರೆ ರೀತಿ ಅರ್ಥ ಕಲ್ಪಿಸುತ್ತಿದ್ದರು. ವಿಕೃತ ಬುದ್ದಿ ಜೀವಿಗಳಿಗೆ ದಿಕ್ಕಾರ ಹೇಳಬೇಕು. ಮನೆಯೊಳಗಿನ ಹೆಗ್ಗಣಗಳು ದೇಶದ ಅಂತಃಸತ್ಯವನ್ನು ಕುಗ್ಗಿಸುತ್ತಿವೆ. ಕೆಂಪಂಗಿ ದೊರೆಗಳು ದೇಶವನ್ನೇ ಹಾಳು ಮಾಡಿವೆ ಎಂದು ಟೀಕಿಸಿದರು.
ಹೊಟ್ಟೆಗಿಲ್ಲದೆ ಸತ್ತರೂ ಸ್ವಾತಂತ್ರ ಬೇಕೆಂಬುದು ಮನುಷ್ಯತ್ವದ ಲಕ್ಷಣ. ಕೈಗಾರಿಕಾ ತರಬೇತಿಯ ಕೌಶಲ್ಯಾಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯುತ ಕೆಲಸ ಮಾಡಲು ಸಮಗ್ರ ಯೋಜನೆ ರೂಪಿಸಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ವಿಷಯಾಧಾರಿತ ವಿಶ್ಲೇಷಣೆ ಮಾಡಿದರೆ ತಪ್ಪುದಾರಿಗೆ ಎಳೆದಂತಾಗುತ್ತದೆ ಎಂದು ಹೇಳಿದರು.
ಜಪಾನ್ ಮತ್ತು ಇಸ್ರೇಲ್ ಯಾವ ರೀತಿ ತಲೆ ಎತ್ತಿ ನಿಂತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೊಟ್ಟೆಪಾಡಿಗಾಗಿ ಕೌಶಲ್ಯಾಭಿವೃದ್ಧಿ ಎಂದರೆ ಸಣ್ಣತನವಾಗುತ್ತದೆ. ನಮ್ಮ ಚಿಂತನೆ ವಿಶಾಲವಾಗಿರಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿ, ಚೈನಾ ದೇಶದಲ್ಲಿರುವಂತೆ ಶಿಕ್ಷಣದ ಜತೆಗೆ ವಾಹನ-ಕಂಪ್ಯೂಟರ್ ತರಬೇತಿ ನೀಡಬೇಕು. ನಮ್ಮ ರಾಷ್ಟ್ರದಲ್ಲಿ ಕೌಶಲ್ಯಾಭಿವೃದ್ಧಿ ಕೊರತೆ ಇದೆ. ಯುವ ಶಕ್ತಿಯ ಸುತ್ತಲು ಇರುವ ಕಳೆ ಕಿತ್ತು ದಿಕ್ಕು ತಪ್ಪುವುದನ್ನು ತಪ್ಪಿಸಿ ಕೌಶಲ್ಯಾಭಿವೃದ್ಧಿ ನೀಡಿ ವಿಶ್ವ ಕೌಶಲ್ಯದ ರಾಜಧಾನಿಯಾಗಿ ಭಾರತ ಅಭಿವೃದ್ಧಿಯಾಗಬೇಕೆಂಬ ಪ್ರಧಾನಿಯವರ ಕನಸು ನನಸು ಮಾಡಲು ಮುಂದಾಗಬೇಕು. ಕೌಶಲ್ಯ ವಿರುವ ಯುವಕರನ್ನು ಒದಗಿಸುವಲ್ಲಿ ವಿವಿಗಳು ವಿಫಲವಾಗಿವೆ. ಯುವಕರ ಸಬಲೀಕರಣ ವಾಗಬೇಕು ಎಂದರು.
ಡಾ.ಎಚ್.ಎಂ.ಪ್ರಸನ್ನ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ಮಾತನಾಡಿ, ಡಿಜಿಟಲ್ ತಂತ್ರಜ್ಞಾನದ ಆರೋಗ್ಯ ಸೇವೆಗಾಗಿ ಅಭಿವೃದ್ಧಿಪಡಿಸಿರುವ ಆ್ಯಪ್ನಲ್ಲಿ ವೈದ್ಯರು, ರೋಗಗಳ ಲಕ್ಷಣ ಸೇರಿದಂತೆ ಔಷಧಿ ಮಾಹಿತಿ ದೊರೆಯಲಿದೆ. ಸಣ್ಣ ಹಳ್ಳಿಯಲ್ಲಿ ಕುಳಿತು ಮುಂಬೈನ ಪ್ರಖ್ಯಾತ ವೈದ್ಯರ ಸಲಹೆಯನ್ನು ಖರ್ಚಿಲ್ಲದೆ ಪಡೆಯುವ ಅವಕಾಶವಿದೆ ಎಂದರು.
ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಬಿಜೆಪಿ ಮುಖಂಡರಾದ ವಿರೇಶ್ಕುಮಾರ್, ಮಂಜುನಾಥ್, ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಎಸ್.ಹರೀಶ್, ಕಿತ್ತೂರು ರಾಣಿ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಶಿವಾನಂದಮೂರ್ತಿ ಉಪಸ್ಥಿತರಿದ್ದರು.