ಮುಂಬೈ, ಫೆ.25-ಶ್ರೀದೇವಿ-ಭಾರತೀಯ ಚಿತ್ರರಂಗದ ದೊಡ್ಡ ಹೆಸರು.. ಚಿತ್ರೋದ್ಯಮದ ಪ್ರಥಮ ಸೂಪರ್ಸ್ಟಾರಿಣಿ ಬಾಲ್ಯದಿಂದ ಚಿತ್ರರಂಗದ ಸಾಮ್ರಾಜ್ಞಿಯಾಗಿ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂಥದ್ಧು.
13ನೇ ಅಗಸ್ಟ್ 1963ರಲ್ಲಿ ಜನಿಸಿದ ಶ್ರೀದೇವಿಯ ಬಾಲ್ಯದ ಹೆಸರು ಶ್ರೀ ಅಮ್ಮ ಯಾಂಗೆರ್ ಅಯ್ಯಪ್ಪನ್. ನಾಲ್ಕು ವರ್ಷವಿದ್ದಾಗಲೇ ಬಾಲನಟಿಯಾಗಿ ಬಣ್ಣ ಹಚ್ಚಿದರು. ಎಂ.ಎ. ದಿರುಮುಗಂ ನಿರ್ದೇಶನದ ಭಕ್ತಿ ಪ್ರಧಾನ ಸಿನಿಮಾ ತುನೈವನ್ನಲ್ಲಿ ಬಾಲ ಕಲಾವಿದೆಯಾಗಿ ಗಮನಸೆಳೆದರು. ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸುವ ಅವಕಾಶ ಈಕೆಯನ್ನು ಹುಡುಕಿಕೊಂಡು ಬಂದಿತ್ತು. ವರನಟ ಡಾ.ರಾಜ್ಕುಮಾರ್ ಅಭಿನಯದ ಭಕ್ತಕುಂಬಾರ ಸಿನಿಮಾದಲ್ಲಿ ನಟಿಸಿ ಚಿತ್ರಪ್ರೇಮಿಗಳನ್ನು ಆಕರ್ಷಿಸಿದರು.
1975ರಲ್ಲಿ ಜೂಲಿ ಚಿತ್ರದಲ್ಲಿ ಬಾಲನಟಿಯಾಗಿ ಹಿಂದಿ ಚಿತ್ರ ರಂಗ ಪ್ರವೇಶಿಸಿದರು. 1976ರಲ್ಲಿ ತೆರೆಕಂಡ ಮೂಂಡ್ರು ಮುಡಿಚ್ಚು ಶ್ರೀದೇವಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಆಗ ಆಕೆಗೆ ಕೇವಲ 13 ವರ್ಷ. ನಂತರ ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬಂದಿತು. 16 ವಯಥಿನಿಲೇ(1977), ಸಿಗಪ್ಪು ರೋಜಾಕ್ಕಳ್ (1978), ವರುಮಾಯಿನ್ ನಿರಂ ಸಿವಪ್ಪು(1980), ಮೀನ್ಡುಂ ಕೋಕಿಲಾ(1981), ಪ್ರೇಮಾಭಿಷೇಕಂ(1981), ಮೂಂಡ್ರಾಮ್ ಪಿರೈ (1982), ಅಖರಿ ಪೆÇೀರಾಟಂ(1988), ಜಗದೇಕ ವೀರುಡು ಅತಿಲೋಕ ಸುಂದರಿ(1990) ಮತ್ತು ಕ್ಷಣ ಕ್ಷಣಂ(1991) ಶ್ರೀದೇವಿ ನಟಿಸಿದ ಜನಪ್ರಿಯ ತೆಲುಗು ಮತ್ತು ತಮಿಳು ಚಿತ್ರಗಳು.
ಈಕೆಯ ಅದ್ಭುತ ನಟನೆ ಮತ್ತು ಯಶಸ್ಸು ಕಂಡು 1978ರಲ್ಲಿ ಹಿಂದಿ ಚಿತ್ರರಂಗ ಈಕೆಯನ್ನು ಕೈಬೀಸಿ ಕರೆಯಿತು. ಸೋಲ್ವಾ ಸಾವನ್ ಮೂಲಕ ಬಾಲಿವುಡ್ ಪ್ರವೇಶಿಸಿದ ಶ್ರೀದೇವಿಗೆ 1983ರಲ್ಲಿ ತೆರೆಕಂಡ ಹಿಮ್ಮತ್ವಾಲ ದೊಡ್ಡ ಮಟ್ಟದಲ್ಲಿ ಯಶಸ್ಸು ನೀಡಿ, ಹಿಂದಿ ಸಿನಿಮಾದಲ್ಲಿ ಭದ್ರ ಸ್ಥಾನ ನೀಡಿತು. ನಂತರ ಈ ಮೋಹಕ ತಾರೆ ಹಿಂದಿರುಗಿ ನೋಡಲೇ ಇಲ್ಲ. ಯಶಸ್ಸಿನ ಮೇಲೆ ಯಶಸ್ಸು ಚಿತ್ರಗಳು ಸಾಲು ಗಟ್ಟಿದವು. ಮವಾಲಿ, ತೋಫಾ, ನಯಾ ಕದಂ, ಮಖ್ಸದ್, ಮಾಸ್ಟರ್ಜೀ, ನಜ್ರಾನಾ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಅವಾಜ್, ಚಾಂದಿನಿ ಈಕೆಯನ್ನು ಜನಪ್ರಿಯತೆಯ ಉತ್ತುಂಗದಲ್ಲಿ ನಿಲ್ಲುವಂತೆ ಮಾಡಿತು.
ಸದ್ಮಾ, ನಾಗಿನ್, ಚಾಲ್ಬಾಜ್, ಲಮ್ಹೆ, ಖುದಾಗವಾ, ಗುಮ್ರಾಹ್, ಲಾಡ್ಲಾ, ಜುದಾಯಿ ಈ ಐದು ಸಿನಿಮಾಗಳ ಮನೋಜ್ಞ ನಟನೆಗಾಗಿ ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಖ್ಯಾತ ನಟ ಅನಿಲ್ ಕಪೂರ್ ಅವರ ಸಹೋದರ ಬೋನಿ ಕಪೂರ್ ಅವರನ್ನು ವಿವಾಹವಾದ ಶ್ರೀದೇವಿ ಅವರೊಂದಿಗೆ ಕೆಲವು ಸಿನಿಮಾಗಳನ್ನು ಸಹ ನಿರ್ಮಿಸಿದರು.
ಕೆಲಕಾಲ ಚಿತ್ರರಂಗದಿಂದ ದೂರವಿದ್ದ ಶ್ರೀದೇವಿ 2012ರಲ್ಲಿ ಮತ್ತೆ 15 ವರ್ಷಗಳ ಅಂತರದ ನಂತರ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ಮೂಲಕ ಬಾಲಿವುಡ್ಗೆ ಹಿಂದಿರುಗಿದರು. ಮಾಮ್ ಚಿತ್ರದಲ್ಲಿ ತಾಯಿ ಪಾತ್ರಕ್ಕೆ ಜೀವ ತುಂಬಿದ್ದ ಅವರ ಅಭಿನಯ ಮನೋಜ್ಞ. ಈ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿ ವಿಶೇಷ ಗಮನ ಸೆಳೆದರು.
ಪ್ರಶಸ್ತಿ ಪುರಸ್ಕಾರಗಳು: 2013ರಲ್ಲಿ ಇವರಿಗೆ ಭಾರತದ ಸರ್ಕಾರವು ಪದ್ಮಶ್ರೀ ಗೌರವ ನೀಡಿ ಸನ್ಮಾನಿಸಿತು. ಅದೇ ವರ್ಷ ಸಿಎನ್ಎನ್-ಐಬಿಎನ್ ನಡೆಸಿದ 100 ವರ್ಷಗಳಲ್ಲಿ ಭಾರತದ ಮಹಾನ್ ತಾರೆಯರ ಪಟ್ಟಿಯಲ್ಲಿ ಇವರು ಸ್ಥಾನ ಪಡೆದರು.
ಶ್ರೀದೇವಿಯವರಿಗೆ ಒಟ್ಟು ಏಳು ಬಾರಿ ಫಿಲಂಪೇರ್ ಪ್ರಶಸ್ತಿಗಳು ಲಭಿಸಿದ್ದವು. ಮಾಮ್ ಚಿತ್ರಕ್ಕಾಗಿ 2018ರಲ್ಲಿ ಜೀ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ಅಲ್ಟಿಮೇಟ್ ದಿವಾ ಪ್ರಶಸ್ತಿಗೆ ಬಾಜನರಾಗಿದ್ದರು. ಅಲ್ಲದೇ ಬಿಗ್ಸ್ಟಾರ್ ಎಂಟರ್ಟೈನ್ಮೆಂಟ್ , ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಎನ್ಡಿಟಿವಿ ವರ್ಷದ ವ್ಯಕ್ತಿ ಪುರಸ್ಕಾರ, ಟಿಎಸ್ಆರ್-ಟವಿ9 ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವ-ಸನ್ಮಾನಗಳಿಗೂ ಅವರು ಪಾತ್ರರಾಗಿದ್ದಾರೆ.