ಬೆಂಗಳೂರು, ಫೆ.23-ಸ್ಪೀಡ್ ಗೌರ್ನರ್ ಅಳವಡಿಕೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿದೆ. ಅಧಿಕಾರಿಗಳು ಶಾಮೀಲಾಗಿ ತಮಗಿಷ್ಟ ಬಂದ ಕಂಪೆನಿಗಳಿಗೆ ಸ್ಪೀಡ್ ಗೌರ್ನರ್ ಅಳವಡಿಕೆಗೆ ಅವಕಾಶ ನೀಡಿದ್ದಾರೆ ಎಂದು ಪರಿಷತ್ ಕಲಾಪದಲ್ಲಿ ಪುಟ್ಟಣ್ಣ , ರಾಮಚಂದ್ರಗೌಡ ಗಂಭೀರ ಆರೋಪ ಮಾಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಪುಟ್ಟಣ್ಣ, ಸ್ಪೀಡ್ ಗೌರ್ನರ್ ಅಳವಡಿಸಲು 19 ಕಂಪೆನಿಗಳಿಗೆ ಅವಕಾಶವಿದ್ದರೂ ರೋಜ್ಮಿತ್ರ ಆಟೋ ಟೆಕ್ನೋ ಪ್ರೈವೇಟ್ ಲಿಮಿಟೆಡ್, ಟ್ರೈಕೋ ಲಿಮಿಟೆಡ್ ಎಂಬ ಎರಡು ಕಂಪೆನಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಒಂದೂವರೆ ಸಾವಿರದಿಂದ 2 ಸಾವಿರ ರೂ.ಗಳಿಗೆ ಸಿಗುವ ಸ್ಪೀಡ್ ಗೌರ್ನರ್ ಅನ್ನು ನಮ್ಮ ರಾಜ್ಯದಲ್ಲಿ ಒಂಭತ್ತೂವರೆ ಸಾವಿರದಿಂದ ಹದಿಮೂರೂವರೆ ಸಾವಿರಗಳಿಗೆ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ಭಾರೀ ವಂಚನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬೇರೆ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿಗುವ ಸ್ಪೀಡ್ ಗೌರ್ನರ್ (ವೇಗ ನಿಯಂತ್ರಕ)ಗಳನ್ನು ನಮ್ಮ ರಾಜ್ಯದಲ್ಲಿ ಏಕೆ ದುಬಾರಿ ವೆಚ್ಚಕ್ಕೆ ಖರೀದಿಸಬೇಕು. 2009ರ ಮಾರ್ಗಸೂಚಿ ಅಳವಡಿಸಿ ವಾಹನಗಳಿಗೆ ಸ್ಪೀಡ್ ಗೌರ್ನರ್ ಅಳವಡಿಸುವ ಕಂಪೆನಿಗಳಿಗೆ ಅನುಮತಿ ನೀಡಿರುವುದರಿಂದ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಿನ ದರ ನಿಗದಿ ಪಡಿಸಿ ವಾಹನ ಮಾಲೀಕರನ್ನು ಸುಲಿಗೆ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರಾಮಚಂದ್ರಗೌಡ ಅವರು, ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿದ ಮಾರ್ಗಸೂಚಿಗಳನ್ನು ಬದಿಗೆ ಸರಿಸಿ ಅಧಿಕಾರಿಗಳು ಈ ಕಂಪೆನಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಂತಿದೆ. ನ್ಯಾಯಾಲಯ ಕಂಪೆನಿಗಳಿಗೆ ತಡೆಯಾಜ್ಞೆ ನೀಡಿದೆಯೇ ಹೊರತು, ಸರ್ಕಾರಕ್ಕಲ್ಲ. ಸರ್ಕಾರ ಮಧ್ಯಪ್ರವೇಶಿಸಿ ವಾಹನ ಮಾಲೀಕರಿಗೆ ಆಗುತ್ತಿರುವ ಸುಲಿಗೆಯನ್ನು ತಪ್ಪಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ನ್ಯಾಯಾಲಯದ ಆದೇಶದಂತೆ ಈ ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ. ಆದಾಗ್ಯೂ ಕಡಿಮೆ ದರದಲ್ಲಿ ಸ್ಪೀಡ್ ಗೌರ್ನರ್ ಒದಗಿಸಿಕೊಡುವ ಬಗ್ಗೆ ಪರಿಶೀಲನೆ ಮಾಡುವ ಭರವಸೆ ನೀಡಿದರು.