ಬೆಂಗಳೂರು:ಫೆ-23: ದೇಶದಲ್ಲೇ ಇದೇ ಮೊದಲಬಾರಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಲೂನ್ ಒಂದು ಆರಂಭವಾಗುತ್ತಿದೆ. ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದಲ್ಲಿ ಹೈಟೆಕ್ ಯೂನಿಸೆಕ್ಸ್ ಸಲೂನ್ ಉದ್ಘಾಟನೆಗೊಳ್ಳುತ್ತಿದೆ.
ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಇದೇ ಭಾನುವಾರ ದೇಶದ ಮೊದಲ ಮೆಟ್ರೋ ನಿಲ್ದಾಣದಲ್ಲಿನ ಸಲೂನ್ ಆರಂಭವಾಗುತ್ತಿದ್ದು, ಬೆಂಗಳೂರು ಮೆಟ್ರೊ ರೈಲು ನಿಗಮ ಹೈದರಾಬಾದ್ ಮೂಲದ ಸೂಪರ್ ಎಕ್ಸ್ ಪ್ರೆಸ್ ಸಲೂನ್ ಗೆ 5 ವರ್ಷಗಳ ಗುತ್ತಿಗೆಗೆ ನೀಡಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಲೂನ್ ತೆರೆದಿರುತ್ತದೆ.
ಈ ಸಂಸ್ಥೆ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ ಮತ್ತು ಮಹಾಲಕ್ಷ್ಮಿ ಲೇ ಔಟ್ ಮೆಟ್ರೊ ನಿಲ್ದಾಣದಲ್ಲಿ ಕೂಡ ಸಲೂನ್ ಆರಂಭಿಸಲು ಗುತ್ತಿಗೆ ಪಡೆದುಕೊಂಡಿದೆ. ವೇಕಮ್ ವಾಷಿಂಗ್ ಎಂಬುದು ಸಲೂಲ್ ನ ಮುಖ್ಯ ಪರಿಕಲ್ಪನೆಯಾಗಿದ್ದು, ತಲೆಕೂದಲು ಕತ್ತರಿಸಿದ ನಂತರ ವಾಕ್ಯುಮ್ ಕ್ಲೀನರ್ ತರಹದ ಉಪಕರಣ ಉಪಯೋಗಿಸುತ್ತಾರೆ. ಇದರಿಂದ ತಲೆಕೂದಲು ಮತ್ತು ಗಡ್ಡ ಕತ್ತರಿಸಿಕೊಂಡ ವ್ಯಕ್ತಿಯ ಬಟ್ಟೆಯಲ್ಲಿ ಅಥವಾ ದೇಹದ ಮೇಲೆ ಕೂದಲು ಬಿದ್ದಿರುವುದಿಲ್ಲ. ಅಲ್ಲದೆ ಗ್ರಾಹಕರ ಕೂದಲು ಕತ್ತರಿಸಲು ಬಳಸಿದ ಬಾಚಣಿಗೆಯನ್ನು ಆ ವ್ಯಕ್ತಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಸಲೂನ್ ನ ಶ್ರೀದೇವಿ ರೆಡ್ಡಿ ಮಾಹಿತಿ ನೀಡಿದ್ದಾರೆ.
2012ರಲ್ಲಿಯೇ ಬೆಂಗಳೂರಿನ ಮೆಟ್ರೊ ನಿಲ್ದಾಣದಲ್ಲಿ ಸಲೂನ್ ತೆರೆಯಲು ನಾವು ಯೋಜನೆ ಹಾಕಿಕೊಂಡಿದ್ದೆವು. ಆದರೆ ಅಷ್ಟೊಂದು ಪ್ರೋತ್ಸಾಹ ಸಿಗದ ಕಾರಣ ಮುಂದೂಡಲಾಯಿತು. ಇಂದು ಪ್ರತಿ ಮೆಟ್ರೊ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 10,000 ಪ್ರಯಾಣಿಕರು ಬಂದು ಹೋಗುತ್ತಾರೆ. ಹೀಗಾಗಿ ಇದು ಉತ್ತಮ ಅವಕಾಶ, ಕಡಿಮೆ ಸಮಯದಲ್ಲಿ ಅಗ್ಗದ ದರದಲ್ಲಿ ಸಲೂನ್ ನಲ್ಲಿ ಸೇವೆ ನೀಡುವುದು ನಮ್ಮ ಗುರಿಯಾಗಿದೆ. ಸಲೂನ್ ನಲ್ಲಿ 8 ಮಂದಿ ಎಲ್ಲಾ ಪುರುಷ ಸಿಬ್ಬಂದಿಯಿರುತ್ತಾರೆ. ಪ್ರತಿ ವ್ಯಕ್ತಿಗೆ ಶೇಕಡಾ 18ರಷ್ಟು ಜಿಎಸ್ ಟಿ ಸೇರಿದಂತೆ 150 ರೂಪಾಯಿ, ಮಹಿಳೆಯರಿಗೆ ಯಾವುದೇ ವಿನ್ಯಾಸದಲ್ಲಿ ತಲೆಕೂದಲು ಕತ್ತರಿಸಿಕೊಂಡರೆ 200 ರೂಪಾಯಿ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Namma Metro, hair salon,Trinity Metro station