ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಪೋಲೀಸರ ಭೇಟಿ; ಸಿಸಿಟಿವಿ ದೃಶ್ಯಾವಳಿ ವಶಕ್ಕೆ

ನವದೆಹಲಿ:ಫೆ-23: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿರುವ ದೆಹಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.

ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ಇದಕ್ಕಾಗಿ ಉತ್ತರ ದೆಹಲಿ ಹೆಚ್ಚುವರಿ ಪೊಲೀಸ್ ಸಹಾಯಕ ಆಯುಕ್ತ ಹರಿಂದರ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಘಟನೆ ನಡೆದ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದಾರೆ.

ಸುಮಾರು 60-70 ಪೊಲೀಸ್ ಸಿಬ್ಬಂದಿ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದು, ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಹಲ್ಲೆ ನಡೆದ ಪ್ರಕರಣ ಸಂಬಂಧ ಕೇಜ್ರಿವಾಲ್ ನಿವಾಸದ ಸಿಬ್ಬಂಧಿಗಳನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ. ಇನ್ನು ಈಗಾಗಲೇ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸ್ವತಃ ದೆಹಲಿ ಸರ್ಕಾರದ ವಕ್ತಾರ ಅರುಣೋದಯ್ ಪ್ರಕಾಶ್ ಅವರು ಮಾಹಿತಿ ನೀಡಿದ್ದು, ಭಾರಿ ಪ್ರಮಾಣದ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ ಈ ವೇಳೆ ಪೊಲೀಸರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಸಿಎಂ ನಿವಾಸಕ್ಕೆ ಆಗಮಿಸುವಾಗ ಒಂದು ಮಾಹಿತಿ ಕೂಡ ನೀಡದೇ ನಿವಾಸಕ್ಕೆ ಆಗಮಿಸಿ ಸಾಕ್ಷ್ಯಾಧಾರ ಸಂಗ್ರಹಿಸುತ್ತಿದ್ದಾರೆ. ಪ್ರಜೆಗಳ ಮುಖಾಂತರ ಆಯ್ಕೆಯಾದ ಮುಖ್ಯಮಂತ್ರಿಗೆ ಪೊಲೀಸರು ನೀಡುವ ಗೌರವ ಇದೇ ಏನು ಎಂದು ಅರುಣೋದಯ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chief Secy Assault Case,Delhi Police,CM Kejriwal’s Residence,Probe CCTV Footage

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ