ಬೆಂಗಳೂರು, ಫೆ.23-ಕೇಂದ್ರ ಸರ್ಕಾರ ಶೇ.90ರಷ್ಟು ಕಮೀಷನ್ ಸರ್ಕಾರವೆಂದು ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳು ನಿನ್ನೆ ವಿಧಾನಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶೇ.90ರಷ್ಟು ಕಮೀಷನ್ ಸರ್ಕಾರ ಎಂದು ಹೇಳಿದ್ದಾರೆ. ಯಾವ ಆಧಾರದ ಮೇಲೆ ಆರೋಪ ಮಾಡಿದ್ದೀರಿ ಎಂದು ಪತ್ರಿಕಾಗೋಷ್ಠಿಯಲ್ಲಿಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ಸಿದ್ದರಾಮಯ್ಯನವರದು 10 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಹೇಳಿದ ಮೇಲೆ ಮೈಮೇಲೆ ಹುಳ ಬಿಟ್ಟುಕೊಂಡಂತೆ ಆ ಪಕ್ಷದ ನಾಯಕರು ವರ್ತಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿರುವ ಬಗ್ಗೆ ದಾಖಲೆಗಳಿದ್ದರೆ, ನಿಮ್ಮ ಪಕ್ಷದ ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ ಭಾರತಕ್ಕೆ ವಿಶ್ವದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಗಾಳಿಯನ್ನು ಗುದ್ದಿ ಓಡಿ ಹೋಗುವ ಕೆಲಸ ಮಾಡಬೇಡಿ. ಮೊದಲು ನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಗರಣಗಳು ನಡೆದಿವೆ ಎಂಬುದನ್ನು ನೋಡಿಕೊಳ್ಳಿ ಎಂದು ಹೇಳಿದರು.
ಗಂಗಾಕಲ್ಯಾಣ ಯೋಜನೆಯಡಿ ಸಮಾಜ ಕಲ್ಯಾಣ ಸಚಿವ ಆಂಜನೇಯ 36 ಸಾವಿರ ಬೋರ್ವೆಲ್ ಕೊರೆಸಿ ಜನರಿಗೆ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಈ ಮೊದಲು 18 ಕಂಪನಿಗಳಿಗೆ 1800 ಬೋರ್ವೆಲ್ ಕೊರೆಸಲು ಮಂಜೂರು ಮಾಡಲಾಗಿತ್ತು. ಆದರೆ ಜ.22ರಂದು ಅಂಬೇಡ್ಕರ್ ಅಭಿವೃದ್ದಿ ನಿಗಮದ ಸಭೆ ಕರೆದು ಒಂದೇ ದಿನದಲ್ಲಿ 36 ಸಾವಿರ ಬೋರ್ವೆಲ್ ಕೊರೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಅಧಿಕಾರ ನಡೆಸಿದ ಅವರಿಗೆ ಬಡಜನರ ನೆನಪಾಗಿಲ್ಲ, ಈಗ ಚುನಾವಣೆ ಸಮೀಪಿಸಿದಾಗ ಬಡಜನರ ನೆನಪಾಗಿದೆ ಎಂದು ಟೀಕಿಸಿದರು.
ಹಿಂದೆ ಹಾಸ್ಟೆಲ್ಗಳಲ್ಲಿ ಹಾಸಿಗೆ -ದಿಂಬು ಖರೀದಿಯಲ್ಲಿ ಅವ್ಯವಹಾರ ನಡೆದಿತ್ತು. ಅದನ್ನು ಮುಚ್ಚಿ ಹಾಕಿದರು. ಆಂಜನೇಯ ಅವರ ಪತ್ನಿ ಮನೆಯಲ್ಲೇ ಕಮೀಷನ್ ಹಣ ಪಡೆದು ಸಿಕ್ಕಿಹಾಕಿಕೊಂಡಿದ್ದರು. ಇಷ್ಟಾದರೂ ತಾವು ಸ್ವಚ್ಛ ಆಡಳಿತ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಶೋಭಾಕರಂದ್ಲಾಜೆ ವಾಗ್ದಾಳಿ ನಡೆಸಿದರು.