ಬೆಂಗಳೂರು, ಫೆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸಮಾವೇಶದಲ್ಲಿ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಕ್ಸಮರಕ್ಕೆ ನಾಂದಿಯಾಯಿತು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ವಿಧಾನಸಭೆಯಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿ ಅವರ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
10ಪರ್ಸೆಂಟ್ ಸರ್ಕಾರ ಎಂದು ಮೋದಿ ಆರೋಪ ಮಾಡಿದ್ದಾರೆ. ಭಾರೀಯ ಸಾಕ್ಷಾಧಾರ ಕಾಯ್ದೆಯ ಪ್ರಕಾರ ಆರೋಪ ಮಾಡಿದವರು ಅದಕ್ಕೆ ದಾಖಲೆಗಳನ್ನು ಒದಗಿಸಬೇಕು. ಇಲ್ಲವಾದರೆ ಅವರು ಹೊಣೆಗಾರರಾಗುತ್ತಾರೆ. ಯಾರು ಯಾರ ಮೇಲಾದರೂ ಆರೋಪ ಮಾಡಬಹುದು ಎನ್ನುವುದಾದರೆ ನನಗೂ ಆರೋಪ ಮಾಡುವುದು ಗೊತ್ತಿದೆ. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 10 ಸಾವಿರ ಕೋಟಿ ವಂಚನೆ ಮಾಡಿ ಪರಾರಿಯಾಗಿದ್ದಾರೆ. ಮಲ್ಯ 9ಸಾವಿರ ಕೋಟಿ ವಂಚನೆ ಮಾಡಿ ಪರಾರಿಯಾಗಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ವಸುಂದರರಾಜೆ ಅವರ ಆಪ್ತರಾಗಿದ್ದ ಲಲಿತ್ಮೋದಿ ಕೂಡ ವಂಚನೆ ಮಾಡಿ ವಿದೇಶಕ್ಕೋಗಿದ್ದಾರೆ.ಇದಕ್ಕೆಲ್ಲ ಯಾರು ಹೊಣೆ ? ಮಾತೆತ್ತಿದರೆ ಗೋವಿಂದರಾಜು ಡೈರಿಯನ್ನು ಪ್ರಸ್ತಾಪಿಸಲಾಗುತ್ತದೆ. ಸಹಾರ ಡೈರಿಯಲ್ಲಿ, ಜೈನ್ ಅವಾಲ ಡೈರಿಯಲ್ಲಿ ಯಾರ ಹೆಸರಿತ್ತು ಎಂದು ಪ್ರಧಾನಮಂತ್ರಿ ಅವರ ಹೆಸರು ಹೇಳಲಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಅಮಿತ್ಶಾ ಪದೇ ಪದೇ ಕೇಂದ್ರದಿಂದ ಕೊಟ್ಟಿರುವ ದುಡ್ಡಿನ ಲೆಕ್ಕಾ ಕೊಡಿ ಎಂದು ಹೇಳುತ್ತಾರೆ. ನಾನು ಈ ಸದನಕ್ಕೆ ಅದೇ ಲೆಕ್ಕವನ್ನು ಕೊಡುತ್ತಿದ್ದೇನೆ. ರಾಜ್ಯದ ಜನರಿಗೆ ಮತ್ತು ಈ ಸದನಕ್ಕೆ ಹಣಕಾಸಿನ ಬಗ್ಗೆ ಉತ್ತರ ಹೇಳುವ ಜವಾಬ್ದಾರಿ ಹೊಂದಿದ್ದೇನೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಕೇಂದ್ರ ಸರ್ಕಾರ ನಮಗೆ ನೀಡುವ ಅನುದಾನ ಭಿಕ್ಷೆ ಅಲ್ಲ. ನಮ್ಮ ರಾಜ್ಯದ ಜನರು ಆದಾಯ ತೆರಿಗೆ, ಸೇವಾ ತೆರಿಗೆ, ಅಬಕಾರಿ ಶುಂಕ ಸೇರಿದಂತೆ ಹಲವಾರು ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಅದರಲ್ಲಿನ ಪಾಲನ್ನು ಪಡೆದುಕೊಳ್ಳುವುದು ನಮ್ಮ ಹಕ್ಕು. ಯಾರೂ ತಮ್ಮ ಜೋಬಿನಿಂದ ಹಣ ನೀಡುವುದಿಲ್ಲ. ಕೊಡುವ ಪಾಲಿನಲ್ಲೇ 10ಸಾವಿರ ಕೋಟಿ ಕಡಿಮೆಯಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಹಿಂದಿನ ಬಿಜೆಪಿ ಸರ್ಕಾರ ಶೇ.90ರಷ್ಟು ಭ್ರಷ್ಟ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದಾಗ ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು. ನೀವು ಮಾಡುವ ಆರೋಪಕ್ಕೆ ದಾಖಲೆ ಕೊಡಿ ಎಂದು ಶೆಟ್ಟರ್ ಸವಾಲು ಹಾಕಿದಾಗ, ಮುಖ್ಯಮಂತ್ರಿ ಸೇರಿದಂತೆ ನಿಮ್ಮ ಸರ್ಕಾರದ ಐದಾರು ಮಂದಿ ಜೈಲಿಗೆ ಹೋಗಿ ಬಂದಿದ್ದರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಕೋಲಾಹಲ ಉಂಟಾಯಿತು.
ಬಿಜೆಪಿಯವರು ಅರ್ಕಾವತಿ ಹಗರಣ, ಸಿದ್ದರಾಮಯ್ಯ ಅವರ ಮಗನೇ ಪ್ರಯೋಗಾಲಯವನ್ನು ಅಕ್ರಮವಾಗಿ ಟೆಂಡರ್ ಪಡೆದಿದ್ದರು. ವಿದೇಶಿ ಮರಳಿನಲ್ಲಿ ಲೂಟಿ ಮಾಡಲಾಗಿದೆ. ಗೋವಿಂದರಾಜು ಡೈರಿನಲ್ಲಿ ಹಲವಾರು ಭ್ರಷ್ಟಾಚಾರ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಲ್ಲದೆ ನಿಮ್ಮದಿ 10 ಪರ್ಸೆಂಟ್ ಅಲ್ಲ 30 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದರು.
ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ, ಬಿಜೆಪಿಯವರು ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ಗುಜರಾತ್ನಲ್ಲಿ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ 9 ವರ್ಷ ಲೋಕಾಯುಕ್ತರನ್ನು ನೇಮಿಸಲಿಲ್ಲ. ಕೇಂದ್ರದಲ್ಲಿ ಈಗಲೂ ಲೋಕಪಾಲ್ ಮಾಡಿಲ್ಲ. ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತೀರಾ ? ನಿಮ್ಮ ಬಗ್ಗೆ ಹೇಳಲು ಬೇಕಾದಷ್ಟಿದೆ ಎಂದು ತಮ್ಮದೇ ಆದ ಭಾವ ಭಂಗಿಯಲ್ಲಿ ತಿರುಗೇಟು ನೀಡಿದರು.
ಇದು ಭಂಡತನದ ಉತ್ತರ. ಸಿಎಂ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿಯವರು ಚುಚ್ಚಿದರು.
ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ಗದ್ದಲದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ನಿಲುವಳಿಯನ್ನು ಸಭಾಧ್ಯಕ್ಷರು ಮಂಡಿಸಿದರು. ಅದಕ್ಕೆ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಧ್ವನಿ ಮತದ ಅಂಗೀಕಾರ ದೊರೆಯಿತು.