ಐದು ವರ್ಷಗಳಲ್ಲಿ ಚುನಾವಣೆ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22-ಕಳೆದ ಐದು ವರ್ಷಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದು, ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿರುವುದರಿಂದ ಪ್ರಭುತ್ವ ವಿರೋಧಿ ಅಲೆ ಇಲ್ಲದಿರುವುದರಿಂದ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತಿಳಿಸಿದರು.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವನೆ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಮುಖ್ಯಮಂತ್ರಿಗಳು, ಜನರಿಗೆ ನಮ್ಮ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿಶ್ವಾಸ, ಸಮಾಧಾನವಿದ್ದು, ಆಡಳಿತ ವಿರೋಧಿ ಅಲೆ ಇಲ್ಲ. ಒಂದು ತಿಂಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜನಾಭಿಪ್ರಾಯ ಸಂಗ್ರಹಿಸಿ ಹೇಳುತ್ತಿರುವುದಾಗಿ ತಿಳಿದರು.

ಬಿಜೆಪಿ ಮಿಷನ್-150 ಎಂದು ಹೇಳುತ್ತಿತ್ತು. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ನಂತರ ಮಿಷನ್ -50 ಆಗಿದೆ ಎಂದು ವ್ಯಂಗ್ಯವಾಡಿದರು.
14ನೇ ವಿಧಾನಸಭೆಯ ಕೊನೆಯ ಅಧಿವೇಶನವಾಗಿದ್ದು, 15ನೇ ವಿಧಾನಸಭೆ ರಚನೆಗಾಗಿ ಚುನಾವಣೆಗೆ ಹೋಗುತ್ತಿದ್ದೇವೆ. ಮತ್ತೆ ಜನರ ಆಶೀರ್ವಾದ ಪಡೆದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಂತದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ನೀವು ಭ್ರಮೆಯಲಿದ್ದೀರಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. 20 ವರ್ಷ ಆಡಳಿತದಲ್ಲಿರುವುದಾಗಿಯೂ ಹೇಳಿದ್ದರು. ಜನ ತೀರ್ಮಾನ ಮಾಡುತ್ತಾರೆ ಎಂದು ಟೀಕಿಸಿದರು.

ಆಗ ಮಾತು ಮುಂದುವರೆಸಿದ ಮುಖ್ಯಮಂತ್ರಿ, ಹತಾಶ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ನಾಲ್ಕು ವರ್ಷ 9 ತಿಂಗಳ ಅವಧಿಯಲ್ಲಿ ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ರಾಜ್ಯ ಪಾಲರು ತಮ್ಮ ಭಾಷಣದಲ್ಲಿ ಇಲಾಖಾವಾರು ಪ್ರಸ್ತಾಪಿಸಿದ್ದಾರೆ. ನಾವು ಏನು ಹೇಳಿದ್ದೋ, ಏನು ಮಾಡಿದ್ದೇವೆ ಎಂಬುದರ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವರಿಗೂ ಧನ್ಯವಾದವನ್ನು ಅರ್ಪಿಸುತ್ತೇವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳ ಪೈಕಿ ಎರಡು, ಮೂರು ಉಳಿದಿರಬಹುದು. ಉಳಿದವೆಲ್ಲವನ್ನೂ ಸಂಪೂÅರ್ಣವಾಗಿ ಈಡೇರಿಸಿದ್ದೇವೆ. ಜನರಿಗೂ ಸಮಾಧಾನವಿದೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ಹೀಗಾಗಿ ನಮ್ಮದು ಭ್ರಮೆಯಲ್ಲ, ಕನಸು ಎಂದು ಸಮರ್ಥಿಸಿಕೊಂಡರು.

ಭ್ರಮೆಗಳು ಈಡೇರದಿದ್ದರೆ ನಿರಾಶರಾಗುತ್ತಾರೆ. ಭ್ರಮಾಲೋಕಾ ಅಥವಾ ಕಲ್ಪನಾ ಲೋಕದಲ್ಲಿ ಓಡಾಡುತ್ತಾ ಇರಬಾರದು. ವಸ್ತುಸ್ಥಿತಿ ಹಾಗೂ ನೆಲೆಗಟ್ಟಿನ ಆಧಾರದ ಮೇಲೆ ಕನಸು ಕಟ್ಟಬೇಕು. ಆ ಕನಸುಗಳನ್ನು ಆನಂತರ ಈಡೇರಿಸುವ ಪ್ರಯತ್ನ ಮಾಡಬೇಕು. ಇದನ್ನು ಕೇವಲ ಬಾಯಿ ಮಾತಿನಿಂದ ಹೇಳುತ್ತಿಲ್ಲ. ಹಸಿವು ಮುಕ್ತ ರಾಜ್ಯ ಮಾಡುವ ಕನಸು ಸಾಕಾರಾಗೊಳಿಸಲು ಪ್ರಯತ್ನಿಸಿದ್ದೇವೆ. ಯಾರೂ ಕೂಡ ಹಸಿವಿನಿಂದ ಮಲಗಬಾರದು, ಆಹಾರಕ್ಕಾಗಿ ಗುಳೆ ಹೋಗಬಾರದು ಎಂದು ತಲಾ 7 ಕೆಜಿಯಂತೆ ಉಚಿತ ಅಕ್ಕಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 3ರೂ.ಗೆ ಅಕ್ಕಿ ಕೊಡುತ್ತಿದೆ ಎಂಬ ಟೀಕೆ ಇದೆ. ಆಹಾರ ಭದ್ರತಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಡಿಮೆ ದರದಲ್ಲಿ ಅಕ್ಕಿ ಕೊಡುತ್ತಿದೆ. ಆದರೆ, ಉಚಿತವಾಗಿ ನೀಡುತ್ತಿರುವುದು ಕರ್ನಾಟಕ ಮಾತ್ರ.

ಬಿಜೆಪಿ ಆಡಳಿತವಿರುವ ರಾಜ್ಯಗಳೂ ಸೇರಿದಂತೆ ಬೇರೆ ಯಾವುದೇ ರಾಜ್ಯಗಳಲ್ಲೂ ಉಚಿತವಾಗಿ ಅಕ್ಕಿ ಕೊಡುತ್ತಿಲ್ಲ. ಕಳೆದ 16 ವರ್ಷಗಳಲ್ಲಿ 13 ವರ್ಷ ಬರ ಆವರಿಸಿದ್ದು, ಪದೇ ಪದೇ ಜನರು ಸಂಕಷ್ಟಕ್ಕೀಡಾಗಿರುವುದನ್ನು ಅರಿತು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದಕ್ಕೆ ಎರಡೂವರೆ ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ 1.40 ಕೋಟಿ ಕುಟುಂಬಗಳಿದ್ದು, 1.08ಕೋಟಿ ಕಟುಂಬಗಳಿಗೆ ಪ್ರಯೋಜನೆ ದೊರೆತಿದೆ. ಇದಲ್ಲದೆ ಇನ್ನು 15ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಾಗುತ್ತಿದೆ ಎಂದು ಹೇಳಿದರು.

ಅನಿಲಭಾಗ್ಯ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಸ್ಟೌವ್ ಒದಗಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ 198 ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ 242 ಇಂದಿರಾ ಕ್ಯಾಂಟಿನ್‍ಗಳನ್ನು ಆರಂಭಿಸಲಾಗುತ್ತಿದೆ. ಶ್ರಮಿಕರು, ನಗರ ಪ್ರದೇಶಗಳಿಗೆ ದಿನನಿತ್ಯ ಬಂದು ಹೋಗುವವರಿಗೆ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗಿದೆ. ಬಾಕಿ ಇರುವ ಕ್ಯಾಂಟಿನ್‍ಗಳು ಇನ್ನೇರಡು ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಬೇಡಿಕೆಗೆ ಹೆಚ್ಚಾದಂತೆ ಇನ್ನೂ ಹೆಚ್ಚಿನ ಕ್ಯಾಂಟಿನ್‍ಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಒಣಬೇಸಾಯಗಾರರ ಅನುಕೂಲಕ್ಕಾಗಿ ಕೃಷಿ ಹೊಂಡ ಹಾಗೂ ಪಾಲಿಹೌಸ್ ನಿರ್ಮಾಣ ಯೋಜನೆ ಜಾರಿಗೆ ತಂದಿದ್ದು, 1.92 ಲಕ್ಷ ರೈತರಿಗೆ ಅನುಕೂಲವಾಗಿದೆ. 1920ಕೋಟಿ ರೂ. ಇದಕ್ಕಾಗಿ ಖರ್ಚು ಮಾಡಲಾಗಿದೆ. ರೈತರ ಫಸಲಿಗೆ ಯೋಗ್ಯ ಬೆಲೆ ಕಲ್ಪಿಸಲು ಎಪಿಎಂಸಿಗಳಲ್ಲಿ ಜಾರಿಗೆ ತಂದ ಆನ್‍ಲೈನ್ ಮಾರಾಟ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಸಮರ್ಪಿಸಿಕೊಂಡರು.

ಅಲ್ಲದೆ ವಾರದಲ್ಲಿ ಐದು ದಿನ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಜತೆಗೆ ಅಪೌಷ್ಠಿಕತೆಯ ನಿವಾರಣೆಗೆ ಕ್ರಮ ಕೈಗೊಂಡಿರಿವುದೂ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳ ವಿವರವನ್ನು ಅಂಕಿ-ಅಂಶಗಳ ಸಹಿತ ಸದನದ ಮುಂದಿಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ