ಪರಿಶಿಷ್ಟ ಜಾತಿ / ಪಂಗಡದ ನೌಕರರಿಗೆ ಮುಂಬಡ್ತಿ ಅಂಗೀಕೃತವಾದ ಮಸೂದೆ ರಾಷ್ಟ್ರಪತಿಗಳ ನಿರ್ಣಯದಂತೆ ತೀರ್ಮಾನ – ಕೃಷಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.22-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿ ನಂತರದ ಜ್ಯೇಷ್ಠತೆ ಸಂರಕ್ಷಿಸಲು ಉಭಯ ಸದನಗಳಿಂದ ಅಂಗೀಕೃತವಾದ ಮಸೂದೆಯನ್ನು ರಾಜ್ಯಪಾಲರು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದು, ರಾಷ್ಟ್ರಪತಿಗಳ ನಿರ್ಣಯದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಎನ್.ಅಪ್ಪಾಜಿಗೌಡ ಅವರ ಪರವಾಗಿ ರಮೇಶ್‍ಬಾಬು ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಸಚಿವರು, ಸದ್ಯ ಉಭಯ ಸದನಗಳಲ್ಲಿ ಅಂಗೀಕೃತವಾದ ಈ ಬಿಲ್ಲು ರಾಷ್ಟ್ರಪತಿಗಳ ಮುಂದೆ ಇದ್ದು, ಅವರು ಕೈಗೊಳ್ಳುವ ನಿರ್ಣಯದ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ನಿವೃತ್ತಿ ಹಂಚಿನಲ್ಲಿರುವವರಿಗೆ ಬಡ್ತಿ ನೀಡಿ ಸಹಜ ನ್ಯಾಯ ಪಾಲನೆ ಮಾಡಲಾಗುವುದು. ಜ್ಯೇಷ್ಠತಾ ಪಟ್ಟಿ ತಯಾರು ಮಾಡಿರುವುದಕ್ಕೆ ಹಿರಿಯ ಅಧಿಕಾರಿ ಅನಿಲ್ ಝಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎಂದು ರಮೇಶ್‍ಬಾಬು ಮಾಡಿದ ಆರೋಪವನ್ನು ತಳ್ಳಿ ಹಾಕಿದ ಸಚಿವರು, ಅವರು ವೈಯಕ್ತಿಕ ರಜೆ ಮೇಲೆ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ