ಅರ್ಹ ದಿನಗೂಲಿ ನೌಕರರಿಗೆ ಎಕ್ಸ್‍ಗ್ರೇಷಿಯ- ಕೃಷಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.22-ಅರ್ಹ ದಿನಗೂಲಿ ನೌಕರರಿಗೆ ಎಕ್ಸ್‍ಗ್ರೇಷಿಯ ನೀಡುವ ಸಂಬಂಧ ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ಗೆ ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಅವರು, ದಿನಗೂಲಿ ನೌಕರರಿಗೆ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ ಸೇವಾ ಸೌಲಭ್ಯಗಳನ್ನು ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.

ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅವರಿಗೆ ಸೌಲಭ್ಯಗಳು ಸಿಗುವ ಕಾನೂನು ಅನ್ವಯವಾಗುತ್ತದೆ. ಎಕ್ಸ್‍ಗ್ರೇಷಿಯ ನೀಡುವ ಬದಲಾಗಿ ಉಪಧನ ಪಾವತಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಎಕ್ಸ್‍ಗ್ರೇಷಿಯ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದರು.

ಮೂವತ್ತು ವರ್ಷಗಳಿಂದ ಅರ್ಧ ವೇತನಕ್ಕೆ ದಿನಗೂಲಿಯಲ್ಲಿ ಕಾರ್ಯನಿರ್ವಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರ ಕುಟುಂಬಕ್ಕೆ ಜ್ಯೋತಿಸಂಜೀವಿನಿ ಯೋಜನೆ ನೀಡಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಕಾರಣ ಅವರು ಸಂವಿಧಾನಾತ್ಮಕವಾಗಿ ನೇಮಕಾತಿ ಹೊಂದಿದವರಲ್ಲ. ಈ ಯೋಜನೆಯು ಸರ್ಕಾರಿ ನೌಕರರಿಗೆ ವಿಸ್ತರಿಸುವ ಯೋಜನೆಯಾಗಿದೆ. ಆದಾಗ್ಯೂ ಇದನ್ನು ಪರಿಶೀಲಿಸುವುದಾಗಿ ಹೇಳಿದರು.

ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಗಳ 2013ರ ಅನ್ವಯ ಈ ನೌಕರರಿಗೆ ಎನ್‍ಪಿಎಸ್ ಸ್ವಾವಲಂಬನೆ ಯೋಜನೆಯನ್ನು ಜಾರಿಗೊಳಿಸಬೇಕಾಗಿದ್ದು, ಕೇಂದ್ರ ಸರ್ಕಾರ 2015-16ರಿಂದ ಇದನ್ನು ಸ್ಥಗಿತಗೊಳಿಸಿದೆ. ಹಾಗಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿಗೆ ಮತ್ತು ಸೇವಾವಧಿಯ ಕನಿಷ್ಠ ಭದ್ರತೆ, ಉತ್ತಮ ವೇತನ ಹಾಗೂ ಕೆಲವು ಸಾಮಾಜಿಕ ಭದ್ರತೆ ಕಲ್ಪಿಸಲು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ನ್ನು ಜಾರಿಗೆ ತರಲಾಗಿದೆ. ದಿನಗೂಲಿ ನೌಕರರ ಪ್ರವರ್ಗವನ್ನು ಗಮನದಲ್ಲಿರಿಸಿ ಅವರನ್ನು ಸೇವೆಯಲ್ಲಿ ಮುಂದುವರೆಸಿದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನ ರಾಜ್ಯಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿ ಭತ್ಯೆಯ ಶೇ.75ರಷ್ಟು ಮತ್ತು ಮನೆ ಬಾಡಿಗೆ ಭತ್ಯೆಯ ಸಾಮಾನ್ಯ ದರಗಳ ಶೇ.75ರಷ್ಟನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ