ಬೆಂಗಳೂರು:ಫೆ-22: ವಿಧಾನಸಭಾ ಚುನಾವಣಾ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯವರ ಎರಡನೇ ಹಂತದ ರಾಜ್ಯ ಪ್ರವಾಸ ಇದೇ 24ರಿಂದ 26ವರೆಗೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಫೆ.24ರಿಂದ ಮತ್ತೆರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಕಾಂಗ್ರೆಸ್ ನಿಂದ ಎರಡನೇ ಹಂತದ ಜನಾರ್ಶೀವಾದ ಯಾತ್ರೆ ಫೆ.26ವರೆಗೆ ಮುಂಬೈ ಕರ್ನಾಟಕದಲ್ಲಿ ನಡೆಯಲಿದೆ ಎಂದರು.
ಮೂರು ದಿನಗಳ ಕಾಲದ ಈ ಪ್ರವಾಸದಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ನಿಗದಿಯಾದ ಸ್ಥಳಗಳಲ್ಲಿ ಸಮಾವೇಶ,ರೋಡ್ ಶೋ, ಕೈ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಜೊತೆ ರಾಜ್ಯದ ಎಲ್ಲ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ ಎಂದು ವಿವರಿಸಿದರು.
ಇದೇ ವೇಳೆ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್, ನಲಪಾಡ್ ಪ್ರಕರಣ ಗೊತ್ತಾದ ತಕ್ಷಣ ನಲಪಾಡ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಕಾನೂನು ಪ್ರಕಾರ ನಲಪಾಡ್ ಮೇಲೆ ಪೊಲೀಸರು ಕ್ರಮ ತೆಗದುಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ ಎಂದರು.
ಇನ್ನು ಪೆಟ್ರೋಲ್ ನಾರಾಯಣಸ್ವಾಮಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷಕ್ಕೆ ಮುಜುಗರವಾಗುವ ಘಟನೆಗಳನ್ನ ನಾವು ಸಹಿಸುವುದಿಲ್ಲ. ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನ ಹೊಣೆ ಮಾಡೋದು ಸರಿಯಲ್ಲ.
ಒಂದು ವೇಳೆ ಈ ರೀತಿಯ ಪ್ರಕರಣಗಳಲ್ಲಿ ಯಾರಾದ್ರೂ ಮುಂದೆ ಭಾಗಿಯಾದ್ರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
KPCC President,Dr G Parameshwar,press meet,Rahul gandhi