ಬೆಂಗಳೂರು, ಫೆ.22- ಲಕ್ಷಾಂತರ ಕೃಷಿ ಹೊಂಡ ನಿರ್ಮಾಣ, ಕೋಟ್ಯಂತರ ಜನರಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಯಿಂದ ಲಾಭ, ರೈತರ ಸಾಲ ಮನ್ನಾ, ಶೋಷಿತ ವರ್ಗಗಳಿಗೆ ಸಾವಿರಾರು ಕೋಟಿ ಅನುದಾನ ಸೇರಿದಂತೆ ಮಹತ್ವದ ಜನಪರ ಯೋಜನೆಗಳನ್ನು ಜಾರಿಗೊಳಿಸಿರುವ ನಮ್ಮ ಸರ್ಕಾರವನ್ನು ನಿಷ್ಕ್ರಿಯ ಸರ್ಕಾರ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಪಕ್ಷದ ನಾಯಕರನ್ನು ಪ್ರಶ್ನಿಸಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ವಿಧಾನಸಭೆಯಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿ, ಪ್ರತಿ ಪಕ್ಷ ನಾಯಕ ಶೆಟ್ಟರ್ ಮಾತನಾಡುವಾಗಲೆಲ್ಲಾ ಸಿದ್ದರಾಮಯ್ಯ ಸರ್ಕಾರ ಟೇಕಾಪ್ ಆಗಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಒಂದು ನಿಷ್ಕ್ರಿಯ ಸರ್ಕಾರ ಇಷ್ಟೆಲ್ಲಾ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಎಂದು ಅಂಕೆ-ಸಂಖ್ಯೆ ಸಹಿತ ವಿವರಿಸಿದರು.
ನೀರಾವರಿಗೆ ಐದು ವರ್ಷದಲ್ಲಿ 58 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಿ 44,552 ಕೋಟಿಯನ್ನು ಜನವರಿ ಅಂತ್ಯದವರೆಗೆ ಖರ್ಚು ಮಾಡಲಾಗಿದೆ. ಮಾರ್ಚ್ ವೇಳೆಗೆ 57 ಸಾವಿರ ಕೋಟಿವರೆಗೂ ಖರ್ಚು ಮಾಡುತ್ತೇವೆ. ಕೃಷ್ಣಾ ಮೇಲ್ದಂಡೆಗೆ 8500ಕೋಟಿ ಹಂಚಿಕೆ ಮಾಡಿ 7200 ಕೋಟಿ ಖರ್ಚು ಮಾಡಿದ್ದೇವೆ. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ಅನುದಾನ ಬೇಕು ಎಂದು ಹೇಳಿದರು.
ರೈತರ ಕೃಷಿ ಪಂಪ್ಸೆಟ್ಗೆ 2017-18ರಲ್ಲಿ 12 ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತದೆ.1.92 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 1.08 ಲಕ್ಷ ಕುಟುಂಬಕ್ಕೆ ಅಕ್ಕಿ ನೀಡಲಾಗಿದೆ. ಕ್ಷೀರಭಾಗ್ಯ ಯೋಜನೆಯಡಿ 1.02 ಕೋಟಿ ಮಕ್ಕಳಿಗೆ ಹಾಲು ನೀಡಲಾಗಿದೆ. 9 ಲಕ್ಷ ಕುಟುಂಬಗಳಿಗೆ 5ರೂ.ನಂತೆ ಪ್ರತಿ ಲೀಟರ್ ಹಾಲಿಗೆ ಪೆÇ್ರೀತ್ಸಾಹ ಧನ ನೀಡಲಾಗಿದೆ. 22 ಲಕ್ಷ ರೈತರಿಗೆ 50ಸಾವಿರ ರೂ. ಸಾಲ ಮನ್ನಾ ಮಾಡಲಾಗಿದೆ. 7 ಲಕ್ಷ ಹೊಸ ರೈತರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ 22.42 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಅದರಲ್ಲಿ ದೇಶಾದ್ಯಂತ ದಲಿತರಿಗೆ ಕೇವಲ 55 ಸಾವಿರ ಕೋಟಿ ಅನುದಾನ ನೀಡಿದೆ. ಆದರೆ ಕರ್ನಾಟಕ 2013ರಲ್ಲಿ ಉಪಯೋಜನೆ ಕಾಯ್ದೆಯನ್ನು ಜಾರಿಗೊಳಿಸಿ ಕಳೆದ ವರ್ಷ 27ಸಾವಿರ ಕೋಟಿ, ಈ ವರ್ಷ 28ಸಾವಿರ ಕೋಟಿ ಅನುದಾನವನ್ನು ದಲಿತರಿಗೆ ಒದಗಿಸಿದೆ. ಕಳೆದ ಐದು ವರ್ಷದಲ್ಲಿ ನಾವು ಒಟ್ಟು 88ಸಾವಿರ ಕೋಟಿಯನ್ನು ದಲಿತರಿಗಾಗಿ ನೀಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ನೀಡಿದ ಅನುದಾನಕ್ಕಿಂತಲೂ ಇದು ನಾಲ್ಕು ಪಟ್ಟು ಹೆಚ್ಚಾಗಿದೆ. ಹಿಂದುಳಿದ ವರ್ಗಗಳಿಗೆ ಬಿಜೆಪಿ ಸರ್ಕಾರ ಮೂರು ಸಾವಿರ ಕೋಟಿ ನೀಡಿದರೆ ನಾವು 10 ಸಾವಿರ ಕೋಟಿಯನ್ನು ಅಲ್ಪಸಂಖ್ಯಾತರಿಗೆ ಬಿಜೆಪಿಯವರು 1400ಕೋಟಿ ನೀಡಿದರೆ ನಾವು 8ಸಾವಿರ ಕೋಟಿಯನ್ನು ನೀಡಿದ್ದೇವೆ. ಬಡವ, ಬಲ್ಲಿದ ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಯೂನಿವರ್ಸ್ಲ್ ಹೆಲ್ತ್ ಸ್ಕೀಂ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.
ಐದು ವರ್ಷದಲ್ಲಿ 3.39ಲಕ್ಷ ಕೋಟಿ ವೆಚ್ಚದ ಕೈಗಾರಿಕಾ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರಿಂದ 13 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಇದು ಗುಜರಾತ್, ಉತ್ತರ ಪ್ರದೇಶದಲ್ಲಿ ಇಂತಹ ಪ್ರಗತಿ ಏಕೆ ಹಾಗಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಅಡ್ಡಿಪಡಿಸಿದ ಜಗದೀಶ್ ಶೆಟ್ಟರ್ ಅವರು, ಅದರಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆಗಳಷ್ಟೇಳಿ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಯೋಜನೆಗಳು ಜಾರಿಗೆ ಬರಲಿವೆ ಎಂದು ಹೇಳಿದ ಮುಖ್ಯಮಂತ್ರಿ, ನಿಷ್ಕ್ರಿಯ ಸರ್ಕಾರದಿಂದ ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕೆಎಸ್ಆರ್ಟಿಸಿಗೆ 205 ಪ್ರಶಸ್ತಿಗಳು ಬಂದಿವೆ ಎಂದು ಸಿಎಂ ಹೇಳಿದಾಗ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಇಲಾಖೆಗೆ ನಮ್ಮ ಸರ್ಕಾರದಲ್ಲೂ ಪ್ರಶಸ್ತಿಗಳು ಬಂದಿದ್ದವು. ನಿಮ್ಮ ಸರ್ಕಾರ ರಸ್ತೆ ತೆರಿಗೆ ವಿನಾಯ್ತಿ ನೀಡದೆ ವಾಯುವ್ಯ ಸಾರಿಗೆಯನ್ನು ಮುಚ್ಚುವ ಸ್ಥಿತಿಗೆ ತಂದಿದೆ ಎಂದು ಶೆಟ್ಟರ್ ಲೇವಡಿ ಮಾಡಿದರು.
ಮಾತು ಮುಂದುವರೆಸಿದ ಸಿಎಂ, ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ. 2016-17ರಲ್ಲಿ ಜಿಡಿಪಿ ಶೇ.7.5ರಷ್ಟಿತ್ತು. 2017-18ರಲ್ಲಿ ಶೇ.8.5ರಷ್ಟಾಗಲಿದೆ. ರಾಷ್ಟ್ರೀಯ ಸರಾಸರಿಗಿಂತಲೂ ನಾವು ನಂ.1 ಸ್ಥಾನದಲ್ಲಿದ್ದೇವೆ. ಜಿಡಿಪಿಯ ಗಾತ್ರ 12 ಲಕ್ಷದಿಂದ 14 ಲಕ್ಷ ಕೋಟಿಗೆ ಹೆಚ್ಚಾಗಿದೆ. ಈ ಬೆಳವಣಿಗೆಯ ದರ ಆಧರಿಸಿ ಸಾಲ ಮಾಡಿದ್ದೇವೆ. ಸಾಲ ಪ್ರಮಾಣ 1.46 ಲಕ್ಷ ಕೋಟಿಗಿಂತ 1.82 ಲಕ್ಷ ಕೋಟಿ ಯಷ್ಟಾಗಿದೆ. ಜಿಡಿಪಿಯ ಗಾತ್ರದ ಶೇ.25ರವರೆಗೂ ಸಾಲ ಪಡೆಯಲು ಅವಕಾಶವಿದ್ದು, ನಾವು ಪಡೆದ ಸಾಲದ ಪ್ರಮಾಣ ಶೇ.19ರಷ್ಟು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ವಿತ್ತೀಯ ಕೊರತೆ ನಿಯಂತ್ರಣದಲ್ಲಿದೆ ಎಂದು ಅವರು ವಿವರಿಸಿದರು.