ಮಹಿಳಾ ಪೈಲೆಟ್ ಅವನಿ ಚತುರ್ವೇದಿಯ ಹೊಸ ಇತಿಹಾಸ

ನವದೆಹಲಿ, ಫೆ.22-ಮಹಿಳಾ ಪೈಲೆಟ್ ಅವನಿ ಚತುರ್ವೇದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೆಟ್ ಯುದ್ಧ ವಿಮಾನವನ್ನು ಚಾಲನೆ ಮಾಡಿದ ದೇಶದ ಪ್ರಪ್ರಥಮ ಪೈಲೆಟ್ ಎಂಬ ಹೆಗ್ಗಳಿಕೆಗೆ ಅವನಿ ಪಾತ್ರರಾಗಿದ್ದಾರೆ.

ಭಾರತೀಯ ವಾಯು ಪಡೆ (ಐಎಎಫ್)ಗೆ ಸೇರಿದ ಎಂಐಜಿ-21 ಫೈಟರ್ ಜೆಟ್‍ನನ್ನು ಅವನಿ ಯಾರ ನೆರವು ಇಲ್ಲದೇ ಏಕಾಂಗಿಯಾಗಿ ಮೊಟ್ಟ ಮೊದಲ ಬಾರಿ ಯಶಸ್ವಿಯಾಗಿ ಚಾಲನೆ ಮಾಡಿ ಹಾರಾಟ ನಡೆಸಿದ್ದಾರೆ ಎಂದು ಐಎಎಫ್ ತಿಳಿಸಿದೆ.

ಜಾಮ್‍ನಗರ ವಾಯು ನೆಲೆಯಿಂದ ನಿನ್ನೆ ಈ ಸಮರ ವಿಮಾನದ ಹಾರಾಟ ನಡೆಯಿತು ಎಂದು ಐಎಎಫ್ ಉನ್ನತಾಧಿಕಾರಿ ಖಚಿತಪಡಿಸಿದ್ದಾರೆ.
ಅವನಿ ಚತುರ್ವೇದಿ, ಭಾವನಾ ಕನತ್ ಮತ್ತು ಮೋಹನಾ ಸಿಂಗ್ ಅವರಿಗೆ ಫೈಟರ್ ಜೆಟ್ ಹಾರಾಟದ ಬಗ್ಗೆ ತರಬೇತಿ ನೀಡಲಾಗಿತ್ತು. ಇವರನ್ನು ಭಾರತೀಯ ವಾಯು ಪಡೆಗೆ ಫ್ಲೈಯಿಂಗ್ ಆಫೀಸರ್ ಆಗಿ 2016ರ ಜುಲೈನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.

ಐಎಎಫ್ ಯುದ್ಧ ವಿಮಾನವನ್ನು ಚಾಲನೆ ಮಾಡಿದ ಭಾರತದ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಅವನಿ ಬಾಜನರಾಗಿರುವುದು ವನಿತೆಯರಿಗೆ ಹೆಮ್ಮೆಯ ಸಂಗತಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ