
ಬೆಂಗಳೂರು:ಫೆ-22: ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣದ ಬೆನ್ನಲ್ಲೇ ಇನ್ನೋರ್ವ ಪ್ರಭಾವಿ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು ಗುಂಪು ದಾಳಿ ನಡೆಸಿದಾಂಧಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ತಿಗಳರ ಪಾಳ್ಯದಲ್ಲಿ ಘಟನೆ ನಡೆದಿದ್ದು, ದ್ವೇಷ ಮತ್ತು ಮನೆ ಮನೆಗೆ ಕಾಂಗ್ರೆಸ್ ಸಮಾವೇಶ ನಡೆಸಲು ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಜೋಗಣ್ಣ ಗೌಡ ಎನ್ನುವವರನ್ನು ಗುರಿಯಾಗಿರಿಸಿಕೊಂಡು ಶಾಸಕ ಸೋಮಶೇಖರ್ ಅವರ 20 ಕ್ಕೂ ಹೆಚ್ಚು ಬೆಂಬಲಿಗರು ಲಾಂಗು,ಮಚ್ಚು, ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜೋಗಣ್ಣ ತಪ್ಪಿಸಿಕೊಂಡು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ,ಕೊಲೆ ಬೆದರಿಕೆ ಹಾಕಿದ್ದು, ಮನೆಗೆ ಕಲ್ಲೂ ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಪ್ರಕಾಶ್ ಎನ್ನುವ ಕೆಲಸಗಾರನನ್ನು ಥಳಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಪ್ರಕಾಶ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆಯಾದರೂ ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.
another congress mla,s t somashekhar,supporters goondaism