ಬೆಂಗಳೂರು, ಫೆ.21-ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳನ್ನು ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ನೀಡುತ್ತಿಲ್ಲ, ಕ್ರೀಡಾ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತಿದೆ ಎಂದು ಸಚಿವ ಪ್ರಮೋದ್ ಮದ್ವರಾಜ್ ಪರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ವಿಧಾನಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳನ್ನು ಕಳೆದ ಸಾಲಿನಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ. ಉನ್ನತ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಲಾಗುತ್ತಿಲ್ಲ. ಕೋರಮಂಗಲ ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳು ನಡೆಯುವ ಸಮಯದಲ್ಲಿ ಕ್ರೀಡೇತರ ಚಟುವಟಿಕೆಗಳಿಗೆ ನಿಗದಿತ ಬಾಡಿಗೆ ಆಧಾರದ ಮೇಲೆ ವಾಣಿಜ್ಯ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಒಳಾಂಗಣ ಕ್ರೀಡಾಂಗಣಗಳಿಂದ ಬರುವ ಎಲ್ಲಾ ಆದಾಯವನ್ನು ಆಯಾ ಕ್ರೀಡಾಂಗಣಗಳ ಅಥವಾ ಕ್ರೀಡಾ ಸಮುಚ್ಚಯಗಳ ಸ್ವಚ್ಛತೆ, ಭದ್ರತೆ, ವಿದ್ಯುತ್ ವೆಚ್ಚ, ದೈನಂದಿನ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.