ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.21- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ. ನನ್ನ ಸ್ವಸಾಮಥ್ರ್ಯದಿಂದ ಬೆಳೆದು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದ ಆವರಣದಲ್ಲಿ ಶಾಸಕರಿಗಾಗಿ ನೂತನವಾಗಿ ನಿರ್ಮಿಸಿರುವ ಸಾಂಸಾರಿಕ ಕೊಠಡಿಗಳ ಕಟ್ಟಡ ಉದ್ಘಾಟನೆ ನಂತರ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಅವರು, ವಿಧಾನಸಭೆಯ ಸಭಾಧ್ಯಕ್ಷರು, ವಿಧಾನಪರಿಷತ್‍ನ ಸಭಾಪತಿ ಹಾಗೂ ಜೆಡಿಎಸ್ ಶಾಸಕರಿದ್ದ ಸಂದರ್ಭದಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.

ಜೆಡಿಎಸ್‍ನ ಮಾಜಿ ಸಚಿವ ಬಸವರಾಜಹೊರಟ್ಟಿ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಸಮ್ಮುಖದಲ್ಲಿ ತಾವು ರಾಜಕೀಯವಾಗಿ ಬೆಳೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ

ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ನನ್ನನ್ನು ಮಂತ್ರಿ ಮಾಡಿದರೇ ಹೊರತು ದೇವೇಗೌಡರಲ್ಲ ಎಂದು ಘತಕಾಲದ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.

ಇದಾದ ನಂತರ ರಾಮಕೃಷ್ಣಹೆಗಡೆ ಅವರ ಮತ್ತು ನನ್ನ ನಡುವಿನ ಬಾಂಧವ್ಯ ಕಡಿತವಾದ ನಂತರ ದೇವೇಗೌಡರು ನನ್ನನ್ನು ಕರೆದುಕೊಂಡು ಹೋದರು.

ದೇವೇಗೌಡರು ನನ್ನನ್ನು ಬೆಳೆಸಿದರು ಎಂದು ಹೇಳುತ್ತಾರೆ. ಆದರೆ, ನನ್ನನ್ನು ಬೆಳೆಸಿದ್ದು ದೇವೇಗೌಡರಲ್ಲ ರಾಮಕೃಷ್ಣ ಹೆಗಡೆ ಎಂದು ಪ್ರಸ್ತಾಪಿಸಿದ್ದಾರೆ.

1983ರಲ್ಲಿ ಸ್ವ ಸಾಮಥ್ರ್ಯದ ಮೇಲೆ ಆಯ್ಕೆಯಾಗಿದ್ದೆ. ಆಗ ದೇವೇಗೌಡರು ಯಾರು ಅಂತಾನೇ ಗೊತ್ತಿರಲಿಲ್ಲ. ಎರಡು ಬಾರಿ ಯಾರ ಹಂಗಿಲ್ಲದೆ ಚುನಾವಣೆಯಲ್ಲಿ ಗೆದ್ದು ಬಂದಿದ್ದೆ ಎಂದು ಸಿಎಂ ಹೇಳಿದ್ದಾರೆ.

ಶ್ರೀಕಂಠೇಗೌಡ, ಹೊರಟ್ಟಿ ಮಧ್ಯೆ ನಾನು ಸಿಕ್ಕಿಹಾಕಿಕೊಂಡಿಲ್ಲ. ಸ್ಪೀಕರ್ ಪಕ್ಕ ಇದ್ದೇನೆ. ನಾನು ಸೇಫಾಗಿದ್ದೇನೆ ಎಂದು ಲೋಕಾಭಿರಾಮವಾಗಿ ಲಘು ಹಾಸ್ಯ ದಾಟಿಯಲ್ಲಿ ಮಾತನಾಡಿದ್ದಾರೆ.

ನನ್ನ ರೀತಿ ನಾಲ್ಕು ಮಂದಿಯನ್ನು ದೇವೇಗೌಡರು ಬೆಳೆಸಲಿ ಎಂದು ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ