ಜನಾಶೀರ್ವಾದ ಯಾತ್ರೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಎರಡನೇ ಹಂತದ ಯಾತ್ರೆಗೆ ಫೆ.24ರಂದು ಆಗಮಿಸುತ್ತಿದ್ದಾರೆ

ಬೆಂಗಳೂರು, ಫೆ.21-ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಯಶಸ್ವಿ ಜನಾಶೀರ್ವಾದ ಯಾತ್ರೆ ಕೈಗೊಂಡ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಫೆ.24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಎರಡನೇ ಹಂತದ ಯಾತ್ರೆಗೆ ಆಗಮಿಸುತ್ತಿದ್ದಾರೆ.

ಮುಂಬೈ ಕರ್ನಾಟಕ ಭಾಗದಲ್ಲೂ ರೋಡ್ ಶೋ, ಸಾರ್ವಜನಿಕ ಸಮಾವೇಶ, ಕಾಂಗ್ರೆಸ್ ಮುಖಂಡರ ಜತೆ ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ರಾಹುಲ್‍ಗಾಂಧಿ ಭಾಗವಹಿಸುತ್ತಿದ್ದು, ಈ ಬಾರಿ ರಸ್ತೆ ಮಾರ್ಗದ ಜತೆಗೆ ವಾಯು ಮಾರ್ಗದ ಸಂಚಾರವನ್ನು ನಡೆಸಲಿದ್ದಾರೆ.

ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಲ್ಲಿ 371ಜೆ ಜಾರಿಯಾಗಿದ್ದರಿಂದ ರಾಹುಲ್‍ಗಾಂಧಿ ಹೋದ ಕಡೆಯಲೆಲ್ಲಾ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹಿರಿಯ ನಾಯಕರ ಜತೆ ರಾಹುಲ್‍ಗಾಂಧಿ 5 ಜಿಲ್ಲೆಗಳಲ್ಲಿ ರಸ್ತೆ ಮೂಲಕವೇ ಸಂಚರಿಸಿದ್ದರು. ಹಾದಿಯುದ್ದಕ್ಕೂ ಹಾರ, ತುರಾಯಿ ಹಾಕಿ ಜಯಘೋಷಗಳನ್ನು ಮೊಳಗಿಸಿ ರಾಹುಲ್‍ಗಾಂಧಿ ಅವರನ್ನು ಆಹ್ವಾನಿಸಲಾಗಿತ್ತು.

ಮುಂಬೈ ಕರ್ನಾಟಕ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಅಲ್ಲಿ ರಾಹುಲ್‍ಗಾಂಧಿ ಅವರಿಗೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಫೆ. 24ರಂದು ಬೆಳಗ್ಗೆ 11.30ಕ್ಕೆ ರಾಹುಲ್‍ಗಾಂಧಿ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ 12.30ಕ್ಕೆ ಅಥಣಿ, ಚಿಕ್ಕೋಡಿ ಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಮಧ್ಯಾಹ್ನ 1 ಗಂಟೆಯವರೆಗೂ ವಿಶ್ರಾಂತಿ ಪಡೆದು ನಂತರ ಅಥಣಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ ವಿಜಯಪುರ ಜಿಲ್ಲೆಯ ತ್ರಿಕೋಟಕ್ಕೆ ತೆರಳಲಿದ್ದಾರೆ. ಅಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ವಿಜಯಪುರ ನಗರದಲ್ಲಿ ರೋಡ್‍ಶೋ ನಡೆಸಲಿದ್ದಾರೆ.

ಸಂಜೆ 6.30ರಿಂದ 7ಗಂಟೆವರೆಗೂ ವಿಜಯಪುರದ ಸಕ್ಯೂರ್ಟ್ ಹೌಸ್‍ನಲ್ಲಿ ವಿಜಯಪುರ, ಚಿಕ್ಕೋಡಿಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆ ಸಮಾವೇಶ ನಡೆಸಲಿದ್ದಾರೆ. ರಾತ್ರಿ 7ರಿಂದ ಹಿರಿಯ ನಾಯಕರ ಜತೆ ಸಭೆ ನಡೆಸಲಿದ್ದಾರೆ.

ಎರಡನೇಯ ದಿನ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಪ್ರವಾಸ ಕೈಗೊಳ್ಳುವ ರಾಹುಲ್‍ಗಾಂಧಿ ಬೆಳಗ್ಗೆ 7.30ಕ್ಕೆ ವಿಜಯಪುರದಲ್ಲಿ ವೃಕ್ಷಥಾನ್ -2018ರ ಅರೆ ಮ್ಯಾರಥಾನ್‍ಗೆ ಚಾಲನೆ ನೀಡಲಿದ್ದಾರೆ.

ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ತೆರಳಿ ಚಿಕ್ಕಪಡಸಲಗಿಯಲ್ಲಿ ಅಣೆಕಟ್ಟು ನಿರ್ಮಾಣದಿಂದ ನೀರಾವರಿ ಸೌಲಭ್ಯ ಪಡೆದ ರೈತರ ಜತೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ ವಿಜಯಪುರ ಜಿಲ್ಲೆಯ ಮುಳವಾಡಕ್ಕೆ ತೆರಳಲಿದ್ದು, ಮಲ್ಲಿಕಾರ್ಜುನ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ನಂತರ ಬಾಗಲಕೋಟೆ ಜಿಲ್ಲೆ ಬೀಳಗಿ, ಮುಧೋಳ್‍ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ, ಲೋಕಪುರದಲ್ಲಿ ರೋಡ್ ಶೋ ಮಾಡಿ ಸಂಜೆ ಮುಖಂಡರ ಜತೆ ಚರ್ಚೆ ನಡೆಸಿ ರಾಹುಲ್ ರಾತ್ರಿ ಬಾಗಲಕೋಟೆ ಸಕ್ಯೂರ್ಟ್ ಹೌಸ್‍ನಲ್ಲಿ ತಂಗಲಿದ್ದಾರೆ.

ಮೂರನೇ ದಿನ ಬಾಗಲಕೋಟೆ, ಬೆಳಗಾಂ, ಧಾರವಾಡ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್‍ಗಾಂಧಿ ಫೆ.26ರ ಬೆಳಗ್ಗೆ 9.20ಕ್ಕೆ ಬಾಗಲಕೋಟೆ ಮತ್ತು ಬೆಳಗಾಂ ಜಿಲ್ಲೆಯ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ನಾಯಕರ ಜತೆ ಎರಡು ಹಂತಗಳಲ್ಲಿ ಸಭೆ ನಡೆಸಲಿದ್ದಾರೆ. ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗಕ್ಕೆ ಆಗಮಿಸುವ ರಾಹುಲ್‍ಗಾಂಧಿ ಮಹತ್ವದ ಎರಡು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಸವದತ್ತಿಯಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಧಾರವಾಡಕ್ಕೆ ಆಗಮಿಸಲಿದ್ದು, ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 7ಗಂಟೆಗೆ ಹುಬ್ಬಳ್ಳಿ-ಧಾರವಾಡದಲ್ಲಿ , ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ಹಿರಿಯ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ. ನಂತರ ರಾತ್ರಿ 8.15ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ.

ಮೊದಲನೆ ಹಂತದ ಪ್ರವಾಸದಲ್ಲಿ ಅತ್ಯುತ್ಸಾಹದಿಂದ ಹೈದರಾಬಾದ್ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ರಸ್ತೆ ಮೂಲಕ ತೆರಳಿದ್ದ ರಾಹುಲ್‍ಗಾಂಧಿ ಎರಡನೇ ಹಂತದ ಪ್ರವಾಸದಲ್ಲಿ ಹೆಚ್ಚಾಗಿ ಹೆಲಿಕಾಫ್ಟರ್ ಬಳಸುತ್ತಿದ್ದಾರೆ. ಅದರಲ್ಲೂ ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯತ್ತ ಕಾಲಿಡುತ್ತಿಲ್ಲ.
ಬಾಗಲಕೋಟೆ, ವಿಜಯಪುರ, ಬೆಳಗಾಂ, ಧಾರವಾಡ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ