ಬೆಂಗಳೂರು,ಫೆ.21-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಬರುವ ದಿನಗಳಲ್ಲಿ ರಾಜ್ಯಕ್ಕೆ ಘಟಾನುಘಟಿ ನಾಯಕರನ್ನು ಆಹ್ವಾನಿಸಿದೆ.
ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆಗಮಿಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಕಾರ್ಯಕರ್ತರಲ್ಲಿ ಇನ್ನಷ್ಟು ಹುಮ್ಮಸ್ಸು ತರುವ ಉದ್ದೇಶದಿಂದ ರಾಜ್ಯ ನಾಯಕರು ಈ ತಿಂಗಳಿನಿಂದ ಪುನಃ ಪ್ರಮುಖ ನಾಯಕರಿಂದ ಭರ್ಜರಿ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಇದೇ 27ರಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಬಿಜೆಪಿ ಮುಂದಾಗಿದೆ.
ಅಂದು ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರ ಸಭೆ ನಡೆಯಲಿದ್ದು , ವಿಶೇಷವಾಗಿ ರೈತರನ್ನು ಸಹ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಖುದ್ದು ನರೇಂದ್ರ ಮೋದಿಯೇ ಆಗಮಿಸುತ್ತಿದ್ದಾರೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ಬಳ್ಳಾರಿ ಸೇರಿದಂತೆ ಮತ್ತಿತರ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಭರದ ಸಿದ್ದತೆಗಳು ನಡೆದಿವೆ.
ಇದಕ್ಕೂ ಮುನ್ನ 24-25ರಂದು ಅಮಿತ್ ಷಾ ಅವರು ಹೈದರಾಬಾದ್ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕಲಬುರಗಿ, ಬೀದರ್ ಹಾಗೂ ಯಾದಗಿರಿಯಲ್ಲಿ ಕಾರ್ಯಕರ್ತರ ಸಮಾವೇಶ, ಬೈಟೆಕ್, ಬೂತ್ ಮಟ್ಟದ ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ದಾವಣಗೆರೆ ಕಾರ್ಯಕ್ರಮದ ನಂತರ ನರೇಂದ್ರ ಮೋದಿ ಅವರು ಪುನಃ ಮಾ.4ರಂದು ಕುಂದಾನಗರಿ ಬೆಳಗಾವಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾವೇರಿಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಮುಂಬೈ ಕರ್ನಾಟಕದ ಮೂಲಕವು ನರೇಂದ್ರ ಮೋದಿ ಚುನಾವಣಾ ಕಹಳೆ ಊದಿದರೆ ಮಾರ್ಚ್ 6ರಂದು ಹಿಂದು ಫೈರ್ ಬ್ರ್ಯಾಂಡ್ ಖ್ಯಾತಿಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿನಲ್ಲಿ ಪಕ್ಷದ ಪರ ಪ್ರಚಾರ ನಡೆಸುವರು.
ಮಾ.11ರಂದು ಮತ್ತೆ ರಾಯಚೂರಿಗೆ ಆಗಮಿಸಲಿರುವ ಮೋದಿ ಇಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಪಕ್ಷದ ಪರ ಪ್ರಚಾರ ನಡೆಸುವರು.
ಲಿಂಬಾವಳಿ ಹೆಗಲಿಗೆ:
ಈಗಾಗಲೇ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಸಂಘಟನೆಯ ಚತುರ ಅರವಿಂದ ಲಿಂಬಾವಳಿಗೆ ಬಿಜೆಪಿಯ ಎಲ್ಲ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೀಡಲಾಗಿದೆ.
ಬೆಂಗಳೂರು ಕಾರ್ಯಕ್ರಮ ಯಶಸ್ವಿ ನಂತರ ಮೈಸೂರಿನಲ್ಲೂ ಸಹ ನಡೆದ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಈಗ ಕೇಂದ್ರ ವರಿಷ್ಠರು ಪ್ರಧಾನಿ ಹಾಗೂ ಕೇಂದ್ರ ನಾಯಕರು, ಪ್ರಮುಖ ನಾಯಕರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಲಿಂಬಾವಳಿ ಹೆಗಲಿಗೆ ನೀಡಿದ್ದಾರೆ.
ದಾವಣಗೆರೆ, ಬೆಳಗಾವಿ, ರಾಯಚೂರು ಸೇರಿದಂತೆ ಮುಂಬರುವ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಎಲ್ಲ ಕಾರ್ಯಕ್ರಮಗಳ ಹೊಣೆಗಾರಿಕೆಯೂ ಲಿಂಬಾವಳಿ ಮೇಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಕಾರ್ಯಕ್ರಮಗಳ ಯಶಸ್ವಿಗೆ ಕೇಂದ್ರ ನಾಯಕರು ಕೂಡ ತೃಪ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರದ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಅವರ ಮೇಲಿದೆ.