ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನ ಪತ್ತೆ

ಚಿಕ್ಕಮಗಳೂರು, ಫೆ.21- ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನಗಳು ಪತ್ತೆಯಾಗಿವೆ.

ಸಂಶೋಧಕ, ಜಿಲ್ಲಾ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಮೇಕನಗದ್ದೆ ಲಕ್ಷ್ಮಣಗೌಡದ ಪತ್ತೆ ಹಚ್ಚಿದ್ದಾರೆ.

ಗ್ರಾಮದ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ನಾಗೇಶಗೌಡ ಇವರ ನೆರವಿನೊಂದಿಗೆ ಅದರಲ್ಲಿರುವ ಬರವಣಿಗೆಯ ನಕಲನ್ನು ಪಡೆದುಕೊಂಡು ಅದರ ಪಠ್ಯವನ್ನು ಸಂಗ್ರಹಿಸಿದ್ದು, ಮೈಸೂರಿನ ಶಾಸನ ತಜ್ಞರಾದ ಎಚ್.ಎಂ.ನಾಗರಾಜ ರಾವ್ ಇವರು ಓದಿ ಪಾಠಾಂತರಗೊಳಿಸಿದ್ದಾರೆ.

ಸುಮಾರು ಒಂದು ಅಡಿ ಚಚ್ಚೌಕಾರದಲ್ಲಿರುವ ಈ ತಾಮ್ರ ಪಟ್ಟಿಕೆಯು ಎರಡೂ ಬದಿಯಲ್ಲಿ ಬರವಣಿಗೆ ಇದ್ದು ಮುಂಭಾಗದಲ್ಲಿ 31 ಸಾಲು ಹಾಗೂ ಹಿಂಭಾಗದಲ್ಲಿ 30 ಸಾಲುಗಳಿವೆ. ಆರಂಭದಲ್ಲಿ ಶಿವ-ಪಾರ್ವತಿ, ವೃಷಭ, ಸೂರ್ಯ ಇತ್ಯಾದಿಗಳು ಪೀಠಗಳಲ್ಲಿವೆ.

ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ಈ ಶಾಸನದ ವಿಶೇಷವಾಗಿದ್ದು ಶಾಸನದಲ್ಲಿ ಈ ನಾಡಿನ ದೇವತೆಗಳು, ಪೌರಾಣಿಕ ರಾಜ ಮನೆತನ ಭಾರತದ ನದಿಗಳ ಉಲ್ಲೇಖಗಳಿವೆ. ಇದೊಂದು ಧರ್ಮ ಶಾಸನವಾಗಿದ್ದು, ಕೊನೆಯಲ್ಲಿ ಶಾಪಾಶಯ ವಾಕ್ಯಗಳಿವೆ.

ಅಂಗವಂಗ ಕಳಿಂಗ ಕರ್ನಾಟಕ ಅಚಿದ್ರ ಮಹಾರಾಷ್ಟ್ರ ಮುಂತಾದ ಛಪ್ಪೆನೈವತ್ತಾರು ದೇಶವನ್ನು ಸುತ್ತಿ ಭಿಕ್ಷಾಟನೆಯಿಂದ ಸಂಗ್ರಹಿಸಿದ ಹಣದಿಂದ ಕಾಶಿ ವಿಶ್ವನಾಥನಿಗೆ 1310 ನೇ ಮಾರ್ಗಶಿರ ಶುದ್ಧ ಗುರುವಾರದಂದು ಮುಖ ಮಂಟಪ ನಿರ್ಮಿಸಿ ರೋಡ್ ಶೋ ಪ್ರಚಾರ ಮಾಡಿಸಿರುವುದಾಗಿ ತಿಳಿಸುತ್ತದೆ.

ಈ ವಿವರಗಳೊಂದಿಗೆ ಈ ಧರ್ಮ ಕಾರ್ಯವನ್ನು ಕಾಯ್ದುಕೊಂಡವರಿಗೆ ನಾಗರ, ನರ್ಮದಾ, ಗೋದಾವರಿ, ಸರಸ್ವತಿ, ತುಂಗಭದ್ರಾ, ಮುಪಹಾರಿ, ಯಮುನ, ಕಾವೇರಿ, ಪುಪರ್ನಿಕ ಮುಂತಾದ ಮಹಾ ನದಿಗಳಲ್ಲಿ ಮಿಂದ ಫಲ ದೊರಕುತ್ತದೆಂದು 14 ಲೋಕಗಳ ನಡುವೆ ಇರುವ ನರಲೋಕದ ಹಿರಿಮೆಯನ್ನು ಬಣ್ಣಿಸಲಾಗಿದ್ದು ತಪ್ಪಿದರೆ ಕಾಸಿಯಲ್ಲಿ ಗೋ ಬ್ರಾಹ್ಮಣ ವಧೆಯ ಫಲ ದೊರೆಯುತ್ತದೆ ಎಂಬ ಶಾಪಾಶಯ ಸಂಸ್ಕøತ ಭಾಷೆಯಲ್ಲಿದೆ.

ಈ ಶಾಸನವನ್ನು ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 33 ನೇ ವಾರ್ಷಿಕ ಸಮ್ಮೇಳನದಲ್ಲಿ ಶ್ರೀ ಮೇಕನಗದ್ದೆ ಲಕ್ಷ್ಮಣಗೌಡ ಇವರು ಮಂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ