ಚೆಮ್ಮನೂರ್ ಚಿನ್ನಾಭರಣ ಮಳಿಗೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನ

ಬೆಂಗಳೂರು, ಫೆ.20-ರಾಜಾಜಿನಗರದ ಮೊದಲನೆ ಹಂತದಲ್ಲಿರುವ ಚೆಮ್ಮನೂರ್ ಚಿನ್ನಾಭರಣ ಮಳಿಗೆಯ ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿ ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಉತ್ತರ ವಿಭಾಗದ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ದರೋಡೆಗೆ ಯತ್ನಿಸಿ ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ಅವರು ಆರು ವಿಶೇಷ ತಂಡ ರಚಿಸಿದ್ದಾರೆ.

ಈ ತಂಡಗಳು ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಅವರ ಬಂಧನಕ್ಕೆ ಬಲೆ ಬೀಸಿದೆ. ಘಟನೆ ನಡೆದ ಚೆಮ್ಮನೂರು ಜ್ಯುವಲರ್ಸ್‍ನ ಮಳಿಗೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಹಾಗೂ ದರೋಡೆಕೋರರು ಪರಾರಿಯಾಗಿರುವ ರಸ್ತೆಗಳಲ್ಲಿನ ಸಿಸಿ ಟಿವಿಗಳ ಫುಟೇಜ್‍ಗಳನ್ನು ವಶಕ್ಕೆ ತೆಗೆದುಕೊಂಡಿರುವ ತನಿಖಾ ತಂಡವೊಂದು ಆರೋಪಿಗಳ ಗುರುತು ಪತ್ತೆ ಹಚ್ಚಲು ಮುಂದಾಗಿದೆ.

ಚಾಲಾಕಿ ದರೋಡೆಕೋರರು ಗುರುತು ಸಿಗಬಾರದೆಂದು ಜರ್ಕಿನ್ ಹಾಗೂ ಹೆಲ್ಮೆಟ್ ಧರಿಸಿದ್ದರಿಂದ ಸಿಸಿಟಿವಿಯಲ್ಲಿನ ದೃಶ್ಯಾವಳಿ ಅಸ್ಪಷ್ಟವಾಗಿದೆ.
ದರೋಡೆಕೋರರ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೆಕ್ಯೂರಿಟಿ ಗಾರ್ಡ್ ನಂಜಪ್ಪ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ದರೋಡೆಕೋರರು ಈ ಚಿನ್ನಾಭರಣ ಮಳಿಗೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿದ ವೇಳೆ ಮತ್ತೊಬ್ಬ ಕಾವಲುಗಾರ ವಿಜಯ್‍ಕುಮಾರ್ ತಕ್ಷಣ ಎಚ್ಚೆತ್ತುಕೊಂಡು ಗುಂಡು ಹಾರಿಸಿ ದರೋಡೆ ತಡೆದಿರುವ ಇವರ ಕಾರ್ಯವೈಖರಿಯನ್ನು ಪೆÇಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ನಿನ್ನೆ ಸಂಜೆ 6.30ರ ಸಮಯದಲ್ಲಿ ಚೆಮ್ಮನೂರು ಚಿನ್ನಾಭರಣ ಮಳಿಗೆಯಲ್ಲಿ ವಹಿವಾಟು ನಡೆಯುತ್ತಿದ್ದಾಗ ಮೂವರು ದರೋಡೆಕೋರರು ಹೆಲ್ಮೆಟ್ ಧರಿಸಿ ಅಂಗಡಿ ಬಳಿ ಬಂದು ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿದಾಗ ಅಂಗಡಿ ಕಾವಲುಗಾರನ ಸಮಯ ಪ್ರಜ್ಞೆಯಿಂದ ದರೋಡೆ ತಪ್ಪಿದಂತಾಗಿದ್ದು, ಈ ಘಟನೆಯಿಂದ ಸುತ್ತಮುತ್ತಲ ನಾಗರಿಕರು ಭಯಭೀತರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ