ನವದೆಹಲಿ:ಫೆ-20: ಆಮ್ ಆದ್ಮಿ ಪಕ್ಷದ ಶಾಸಕರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಅಂಶು ಪ್ರಕಾಶ್ ಅವರು ಹೇಳಿಕೆ ನೀಡಿದ್ದು, ತಮ್ಮ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ತಾವು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ತೆರಳಿದ್ದಾಗ ಅಲ್ಲಿದ್ದ ಆಮ್ ಆದ್ಮಿ ಪಕ್ಷದ ಶಾಸಕರು ತಮ್ಮನ್ನು ಥಳಿಸಿದರು ಎಂದು ಹೇಳಿದ್ದಾರೆ.
ಘಟನೆ ಬಳಿಕ ನೇರವಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಕಚೇರಿಗೆ ತೆರಳಿದ ಅಂಶು ಪ್ರಕಾಶ್ ಅವರು ಈ ಬಗ್ಗೆ ದೂರು ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೂರಿನಲ್ಲಿ ಆಪ್ ಶಾಸಕರಾದ ಅಮಾನತ್ತುಲ್ಲಾಖಾನ್ ಅವರ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜಾಹಿರಾತು ಬಿಡುಗಡೆ ಸಂಬಂಧ ಆಪ್ ಶಾಸಕರು ಮತ್ತು ದೆಹಲಿ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಅವರ ನಡುವೆ ವಾಕ್ಸಮರ ನಡೆದಿದ್ದು, ಈ ವೇಳೆ ಶಾಸಕ ಅಮಾನತ್ತುಲ್ಲಾಖಾನ್ ಸೇರಿದಂತೆ ಇತರೆ ಇಬ್ಬರು ಶಾಸಕರು ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಭೇಟಿ ಬಳಿಕ ದೆಹಲಿಯ ಸರ್ಕಾರಿ ಅಧಿಕಾರಿಗಳು ಸಭೆ ಕರೆದಿರುವ ಅಂಶು ಪ್ರಕಾಶ್ ಅವರು, ಈ ಬಗ್ಗೆ ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಸರ್ಕಾರಿ ಅಧಿಕಾರಿಗಳ ಭದ್ರತೆ ಸಂಬಂಧ ಕಠಿಣ ನಿರ್ಣಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಂಶ ಪ್ರಕಾಶ್ ಆಗ್ರಹಿಸಿದ್ದಾರೆ. ಅಲ್ಲದೆ ಐಎಎಸ್ ಅಧಿಕಾರಿಗಳ ಒಕ್ಕೂಟಕ್ಕೂ ದೂರು ನೀಡಲು ಅಂಶು ಪ್ರಕಾಶ್ ನಿರ್ಧರಿಸಿದ್ದಾರೆ. ಇನ್ನು ಅಂಶು ಪ್ರಕಾಶ್ ದೂರಿನ ಸಂಬಂಧ ದೆಹಲಿ ಪೊಲೀಸ್ ನಿರ್ದೇಶಕರಿಗೆ ಪತ್ರ ಬರೆದಿರುವ ಐಎಎಸ್ ಅಧಿಕಾರಿಗಳ ಒಕ್ಕೂಟ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇಬ್ಬರು ಗೂಂಡಾ ಎಂಎಲ್ ಎ ಗಳ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿದೆ.
ಆದರೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಆರೋಪವನ್ನು ತಳ್ಳಿ ಹಾಕಿರುವ ಆಪ್, ಅಂಶು ಪ್ರಕಾಶ್ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಗುಡುಗಿದೆ.
Delhi Chief Secretary,anshu prakash, Alleges Assault At Arvind Kejriwal’s home