ಬೆಂಗಳೂರು, ಫೆ.20-ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್ಫಾರ್ಮರ್(ಪರಿವರ್ತಕ)ಗಳು ದುರಸ್ತಿಯಾದರೆ ಮೂರು ದಿನದೊಳಗೆ ರಿಪೇರಿ ಮಾಡಿಕೊಡದಿದ್ದರೆ ಸಂಬಂಧಪಟ್ಟ ಇಂಜಿನಿಯರ್ಗಳಿಗೆ ದಂಡ ವಿಧಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಮೂರು ದಿನದೊಳಗೆ ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿ ಮಾಡಬೇಕೆಂದು ಈಗಾಗಲೇ ಸೂಚನೆ ಕೊಡಲಾಗಿದೆ. ಯಾರಾದರೂ ನಿರ್ಲಕ್ಷ್ಯ ವಹಿಸಿದರೆ ಹೋಬಡ್ಸನ್ ಮೂಲಕ ದಂಡ ವಿಧಿಸಲು ಸೂಚಿಸಿರುವುದಾಗಿ ತಿಳಿಸಿದರು.
ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಈ ಬಾರಿ ಬರಗಾಲವಿದ್ದರೂ ಗ್ರಾಮೀಣ ಭಾಗಗಳಲ್ಲಿ ಆರಿಂದ ಏಳು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಎಷ್ಟೇ ಸಮಸ್ಯೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಂದೆಯೂ ಕೂಡ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು.
ಮೊದಲು ಟ್ರಾನ್ಸ್ಫಾರ್ಮರ್ಗಳು ಸುಟ್ಟು ಹೋದರೆ ರಿಪೇರಿ ಮಾಡಲು ತಿಂಗಳುಗಟ್ಟಲೆ ಸಮಯಾವಕಾಶವನ್ನು ಬೇಕಾಗಿತ್ತು. ಈಗ ಪ್ರತಿ ತಾಲ್ಲೂಕಿನಲ್ಲೂ ಒಂದೊಂದು ಟ್ರಾನ್ಸ್ಫಾರ್ಮರ್ ಬ್ಯಾಂಕುಗಳನ್ನು ಮಾಡಲಾಗಿದೆ. ಪ್ರಸ್ತುತ 120 ತಾಲ್ಲೂಕಿನಲ್ಲಿ ಇದು ಜಾರಿಯಲ್ಲಿದೆ. ಹೀಗಾಗಿ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಸತತ 12 ಗಂಟೆಗಳ ಕಾಲ ಎಚ್ಡಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ರೈತರು ಶೇ.25ರಷ್ಟು ಹಣ ಭರಿಸಿದರೆ ವಿದ್ಯುತ್ ಕಂಪೆನಿಗಳು ಶೇ.75ರಷ್ಟು ಹಣವನ್ನು ಭರಿಸಲಿದೆ.
ಶೀಘ್ರ ಸಂಪರ್ಕ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರು 10 ಸಾವಿರ ಠೇವಣಿ ಹಣ ಪಾವತಿಸಬೇಕು. ರೈತರು ಬಯಸಿದರೆ ಮೂಲಭೂತ ಸೌಕರ್ಯಗಳನ್ನು ಕಂಪೆನಿಯೇ ನೀಡಲಿದೆ. ರಾಜ್ಯದಲ್ಲಿ ಸುಮಾರು ಮೂರೂವರೆ ಲಕ್ಷ ರೈತರು ಇದರ ಲಾಪ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಐದು ಲಕ್ಷ ರೈತರು ವಿದ್ಯುತ್ ಸಂಪರ್ಕವನ್ನೇ ಪಡೆಯದೇ ಅಕ್ರಮವಾಗಿ ಸಂಪರ್ಕ ಹೊಂದಿದ್ದರು. ಇದನ್ನು ಪತ್ತೆಹಚ್ಚಿ ಕಡಿತಗೊಳಿಸಾಲಗಿದೆ. ಎಂಥಹದ್ದೇ ಸಂದರ್ಭದಲ್ಲೂ ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ನಮ್ಮ ಸರ್ಕಾರ ಸಿದ್ದವಿದೆ ಎಂದರು.