ಟೋಲ್ ಗೇಟ್‍ಗಳಲ್ಲಿ ಶಾಸಕರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ

ಬೆಂಗಳೂರು, ಫೆ.20-ಟೋಲ್ ಗೇಟ್‍ಗಳಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ …. ವಿಧಾನಪರಿಷತ್‍ನಲ್ಲಿ ತಮ್ಮ ಅಳಲು ತೋಡಿಕೊಂಡ ಸದಸ್ಯರು.

ವಿಧಾನಪರಿಷತ್‍ನ ಬಿಜೆಪಿ ಸದಸ್ಯ ಸೋಮಣ್ಣ ಬೇವಿನಮರದ್ ತಮ್ಮ ಗುರುತಿನ ಚೀಟಿ ಇದ್ದರೂ ಸುಮಾರು ಒಂದೂವರೆ ಗಂಟೆಗಳ ಕಾಲ ಧಾರವಾಡದ ಟೋಲ್‍ನಲ್ಲಿ ಕಾಯಬೇಕಾದ ಪ್ರಸಂಗವನ್ನು ಬಿಡಿಸಿಟ್ಟರು.

ಟೋಲ್‍ಗಳಲ್ಲಿ ಶಾಸಕರಿಗೆ ಆಗುವ ಈ ಮುಜುಗರವನ್ನು ಪಕ್ಷ ಭೇದ ಮರೆತ ಎಲ್ಲಾ ಸದಸ್ಯರು ತೆರೆದಿಟ್ಟರು. ಗುರುತಿನ ಚೀಟಿ ತೋರಿಸಿದರೂ ಅಲ್ಲಿನ ಸಿಬ್ಬಂದಿ ಕೇರ್ ಮಾಡುವುದಿಲ್ಲ. ನೂರಾರು ಮಂದಿ ಇದೇ ರೀತಿ ತೋರಿಸುತ್ತಾರೆ ಎಂದು ನಮ್ಮನ್ನು ಕಾಯಿಸುತ್ತಾರೆ ಎಂದು ಹೊರಟ್ಟಿ, ಸೋಮಣ್ಣ ಬೇವಿನಮರದ್, ಟಿ.ಎ.ಶರವಣ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ತಿಂಗಳು ಧಾರವಾಡ ಟೋಲ್‍ನಲ್ಲಿ ಬರುವಾಗ ಸಭಾಪತಿಗಳು ನೀವೇ ಕೊಟ್ಟ ಗುರುತಿನ ಚೀಟಿ ತೋರಿಸಿದರೂ ಟೋಲ್‍ನ ಸಿಬ್ಬಂದಿ ಬಿಡಲಿಲ್ಲ. ಸುಮಾರು ಒಂದೂವರೆ ತಾಸು ಕಾದರೂ ಕ್ಯಾರೆ ಎನ್ನಲಿಲ್ಲ ಎಂದು ಸೋಮಣ್ಣ ಬೇವಿನಮರದ್ ಹೇಳಿದರೆ, ಬಸವರಾಜ ಹೊರಟ್ಟಿ ಅವರೂ ತಮ್ಮ ಕಹಿ ಅನುಭವವನ್ನು ಹಂಚಿಕೊಂಡರು.

ಆದರೆ, ಶಾಸಕರಲ್ಲದವರೂ ಟೋಲ್‍ನಲ್ಲಿ ಪಾಸಾಗಿದ್ದನ್ನು ಗಮಿಸಿದೆ. ಇಂತಹ ಅವಾಂತರಗಳು ನಡೆಯುತ್ತಿವೆ ಎಂದು ತಿಳಿಸಿದರು.
ಆ್ಯಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ನಮಗೇ ಈ ರೀತಿ ಮುಜುಗರವಾಗುತ್ತಿದೆ. ಆ್ಯಂಬುಲೆನ್ಸ್‍ಗಳ ಗತಿ ಏನು ಎಂದು ಪ್ರಶ್ನಿಸಿದರು, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಉತ್ತರ ನೀಡಿ, ಈ ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಟೋಲ್‍ಗಳಲ್ಲಿ ಆ್ಯಂಬುಲೆನ್ಸ್ ಮತ್ತು ವಿಐಪಿಗಳಿಗೆ ಪ್ರತ್ಯೇಕ ದ್ವಾರ ಇದೆ. ಇನ್ನು ಕೆಲವು ಕಡೆ ಪ್ರತ್ಯೇಕ ದ್ವಾರ ಇಲ್ಲ. ಅಂತಹ ಕಡೆ ಅಡಚಣೆಯಾಗುತ್ತಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ