ಚೆನ್ನೈ, ಫೆ.19-ಕಾವೇರಿ ಜಲವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲು ತಮಿಳುನಾಡಿನ ವಿರೋಧಪಕ್ಷವಾದ ಡಿಎಂಕೆ ಸರ್ವಪಕ್ಷ ಸಭೆ ಕರೆದಿದೆ. ಆದರೆ ಸಭೆ ನಡೆಯುವ ದಿನಾಂಕದ ಬಗ್ಗೆ ಪ್ರಕಟಿಸಿಲ್ಲ.
ಚೆನ್ನೈನಲ್ಲಿ ಕಳೆದ ರಾತ್ರಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಆದರೆ ಈ ಬಗ್ಗೆ ಎಐಎಡಿಎಂಕೆ ಸರ್ಕಾರ ಗಂಭೀರ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಡಿಎಂಕೆ ಸರ್ವ ಪಕ್ಷ ಸಭೆ ಕರೆದಿದೆ ಎಂದು ತಿಳಿಸಿದರು.
ಫೆ.21ರಂದು ಹೊಸ ಪಕ್ಷ ಘೋಷಣೆ ಮಾಡುವ ಖ್ಯಾತ ನಟ ಕಮಲ್ ಹಾಸನ್ ಅವರನ್ನೂ ಈ ಸಭೆಗೆ ಆಹ್ವಾನಿಸಿದ್ದು, ಪಾಲ್ಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸ್ಟಾಲಿನ್ ಹೇಳಿದರು.