ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ.
ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಲಪಾಡ್ ಸೋಮವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಆಟೋದಲ್ಲಿ ಬಂದ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ ಭಾನುವಾರ ಕಬ್ಬನ್ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದರು.
ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಫೆ.17 ರಂದು ರಾತ್ರಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ಪ್ರಕರಣ ನಂತರ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್ ನಾಪತ್ತೆಯಾಗಿದ್ದ.
ಶಾಸಕ ಹ್ಯಾರಿಸ್ ಪುತ್ರ ನಡೆಸಿದ್ದ ಹಲ್ಲೆ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಹಲ್ಲೆ ಪ್ರಕರಣ ನಂತರ ಈ ಹಿನ್ನೆಲೆಯಲ್ಲಿ ಸಂಜೆಯೊಳಗೆ ಎಲ್ಲಾ ಆರೋಪಿಗಳ ಬಂಧಿಸದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದರು. ರಾತ್ರಿ 8 ಗಂಟೆವರೆಗೂ ಬಂಧಿಸದೇ ಇದ್ದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗಿತ್ತು.